ಬೆಂಗಳೂರು :  ‘ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮ ಜನಪರ ಸರ್ಕಾರವನ್ನು ಉರುಳಿಸುತ್ತೇವೆ ಎಂಬ ಉದ್ಧಟನದಿಂದ ಹೊರಟರೆ ನಾಡಿನ ಜನತೆಗೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾನು ಈ ಪುಣ್ಯಭೂಮಿಯಿಂದ ಕರೆ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಲ್ಲದೆ, ‘ಬಿಜೆಪಿಯವರು ಏನೆಲ್ಲಾ ಆರೋಪ ಮಾಡಿದರೂ ಇಲ್ಲಿಯವರೆಗೆ ಬಹಳ ತಾಳ್ಮೆಯಿಂದ ಹೋಗುತ್ತಿದ್ದೇನೆ. ಕೆದಕಿದರೆ ಹಲವು ವಿಷಯಗಳಿವೆ. ಸರ್ಕಾರ ನನ್ನ ಕೈಯಲ್ಲಿಯೂ ಇದೆ. ನಾಳೆ ಬೆಳಗ್ಗೆ ಏನು ಮಾಡಬೇಕು ಎಂಬ ಶಕ್ತಿ ಇಲ್ಲವೇ? ಸ್ಪಲ್ಪ ಎಚ್ಚರಿಕೆಯಿಂದ ಇರಬೇಕು ಎಂಬ ಸಲಹೆ ನೀಡುತ್ತೇನೆ’ ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ವದಂತಿಗಳು ಮತ್ತು ಆ ಕುರಿತು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಆಕ್ರೋಶಭರಿತರಾಗಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಬೆಂಗಳೂರು ಮತ್ತು ಹಾಸನದಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಅವರು, ಗಾಜಿನಮನೆಯಲ್ಲಿ ಕುಳಿತುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ವಯಸ್ಸಿಗೆ ತಕ್ಕಂತೆ ಗಾಂಭೀರ್ಯತೆ ಕಾಪಾಡಿಕೊಳ್ಳಬೇಕು. ಬಿಜೆಪಿಯವರು ಏನೆಲ್ಲಾ ಆರೋಪ ಮಾಡಿದರೂ ಇಲ್ಲಿಯವರೆಗೆ ಬಹಳ ತಾಳ್ಮೆಯಿಂದ ಹೋಗುತ್ತಿದ್ದೇನೆ. ಕೆದಕಿದರೆ ಹಲವು ವಿಷಯಗಳಿವೆ. ನಮ್ಮನ್ನು ಕೆಣಕಿದರೆ ನಿಮ್ಮ ಇತಿಹಾಸವನ್ನೂ ಕೆದಕಬೇಕಾಗುತ್ತದೆ. ಸರ್ಕಾರ ನನ್ನ ಕೈಯಲ್ಲಿಯೂ ಇದೆ. ನಾಳೆ ಬೆಳಗ್ಗೆ ಏನು ಮಾಡಬೇಕು ಎಂಬ ಶಕ್ತಿ ಇಲ್ಲವೇ. ಸ್ಪಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ಕಿಡಿಕಾರಿದರು.

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಜೆಡಿಎಸ್‌ ಶಾಸಕರಿಗೆ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಯಡಿಯೂರಪ್ಪ ಕರೆ ಮಾಡಿ ಆಹ್ವಾನಿಸುತ್ತಿದ್ದಾರೆ. ಇಂತಹ ಕೆಲಸ ನಿಲ್ಲಿಸದಿದ್ದರೆ ನನ್ನ ಕೈಯಲ್ಲಿ ಅಧಿಕಾರ ಇದೆ ಎಂಬುದನ್ನು ಮರೆಯಬಾರದು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬದ ಬಗ್ಗೆ ಹಗುರಾಗಿ ಮಾತನಾಡುತ್ತಿದ್ದಾರೆ. ಪದ ಬಳಕೆಯಲ್ಲಿ ಸ್ಪಲ್ಪ ಹಿಡಿತ ಇಟ್ಟುಕೊಳ್ಳಬೇಕು. ಯಡಿಯೂರಪ್ಪ ಅವರು ರಾಜಕೀಯ ಅನುಭವ, ವಯಸ್ಸು ಎಲ್ಲದರಲ್ಲಿಯೂ ಹಿರಿಯರಾಗಿದ್ದಾರೆ. ಅವರು ವಯಸ್ಸಿಗೆ ತಕ್ಕಂತೆ ಗಾಂಭೀರ್ಯತೆ ಕಾಪಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ನನ್ನ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಗಲಿರುಳು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ರೈತರ ಸಾಲಮನ್ನಾ, ಖಾಸಗಿ ಲೇವಾದೇವಿದಾರರಿಗೆ ಕಡಿವಾಣ ಹಾಕುವುದು ಸೇರಿದಂತೆ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತಂದು ಅವುಗಳ ಅನುಷ್ಠಾನಕ್ಕಾಗಿ ಹಗಲಿರುಳು ಪ್ರಯತ್ನಿಸುತ್ತಿದ್ದೇನೆ. ಆದರೆ, ಇದನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗದೆ ಈ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಸರ್ಕಾರವನ್ನು ಉರುಳಿಸಲು ಹೊರಟಿದ್ದಾರೆ. ನಿಮ್ಮ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನನ್ನ ಸರ್ಕಾರವನ್ನು ಉರುಳಿಸುವ ಉದ್ಧಟತನ ತೋರುತ್ತಿರುವ ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಕೋಪದಿಂದ ಹೇಳಿದರು.

ಯಾರೋ ಸಜ್ಜನರರು, ಉತ್ತಮ ಟೀಕೆ ಮಾಡಿದ್ದರೆ ತಲೆ ಕೆಡಿಸಿಕೊಳ್ಳಬಹುದಿತ್ತು. ಆದರೆ ಜೈಲಿಗೆ ಹೋದವರ ಟೀಕೆಗೆ ಹೆದರುವ ಅಗತ್ಯವಿಲ್ಲ. ಈ ವಿಷಯದಲ್ಲಿ ಬಿಜೆಪಿಯವರು ಹುಡುಗಾಟ ಆಡೋದನ್ನು ನಿಲ್ಲಿಸಬೇಕು, ಅವರೊಬ್ಬರೇ ಅಧಿಕಾರದಲ್ಲಿ ಇರಬೇಕಾ ಎಂದು ಕುಮಾರಸ್ವಾಮಿ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

ಯಾವ ತಪ್ಪಿಗೆ ಸರ್ಕಾರ ಹೋಗಬೇಕು:

ರೈತರ 45 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದಕ್ಕೆ, ವೃದ್ಧಾಪ್ಯ ವೇತನವನ್ನು . 600 ರಿಂದ . 1000ಕ್ಕೆ ಏರಿಸಿದ್ದಕ್ಕೆ ಮತ್ತು ಬೆಳಗಾವಿ, ತುಮಕೂರು, ಬಳ್ಳಾರಿ, ಗುಲ್ಬರ್ಗ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ನನ್ನ ಕನಸು ಕಾಣುವುದಕ್ಕೆ ಸರ್ಕಾರ ಬಿದ್ದು ಹೋಗಬೇಕಾ ಎಂದು ಇದೇ ವೇಳೆ ಕುಮಾರಸ್ವಾಮಿ ಕೇಳಿದರು.

ಮಾಧ್ಯಮಗಳ ವಿರುದ್ದವೂ ಹರಿಹಾಯ್ದ ಅವರು, ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು. ಸರ್ಕಾರ ಅಭದ್ರತೆ ಬಗ್ಗೆ ಇಲ್ಲಸಲ್ಲದ, ಸತ್ಯವಲ್ಲದ ಸುದ್ದಿಯನ್ನು ಪ್ರಕಟಿಸುವುದು ಸರಿಯಲ್ಲ. ಸರ್ಕಾರ ಕರ್ನಾಟದ ಸಮಗ್ರ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಆದ್ದರಿಂದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಿಎಸ್‌ವೈ ಜೊತೆ ರೌಡಿಗಳು:  ನಾನು ಕಿಂಗ್‌ಪಿನ್‌ ಅಂತ ಯಾರ ಹೆಸರೂ ಹೇಳಿಲ್ಲ, ಕಳ್ಳ ಅಂದ್ರೆ ಸೋಮಶೇಖರ್‌ ಏಕೆ ಹೆಗಲು ಮುಟ್ಟಿನೋಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ ಅವರು, ಮುಂದಿನ ದಿನಗಳಲ್ಲಿ ದಂಧೆಕೋರರ ಹೆಸರು ಬಯಲು ಮಾಡುವುದಾಗಿ ಗುಡುಗಿದರು.

ಯಡಿಯೂರಪ್ಪ ಜೊತೆ ರೌಡಿಗಳು ಹವಾಲಾ ಹಣ ಹಂಚುತ್ತಿದ್ದಾರೆ. ಯಡಿಯೂರಪ್ಪನ ಶಿಷ್ಯ ಶ್ರೀಲಂಕಾಗೆ ಕದ್ದುಹೋಗಿದ್ದಾನೆ. ಸರ್ಕಾರ ಟೇಕ್‌ ಆಫ್‌ ಆಗಿರೋದಕ್ಕೆ ಯಡಿಯೂರಪ್ಪ ರ ಶಿಷ್ಯ ಕದ್ದು ಹೋಗಿದ್ದಾನೆ. ಈ ರೌಡಿಗಳನ್ನೆಲ್ಲಾ ನಾನು ಸುಮ್ಮನೆ ಬಿಡಲ್ಲ, ಕಾನೂನು ಕ್ರಮ ಜರುಗಿಸುವುದಲ್ಲದೇ ಯಡಿಯೂರಪ್ಪ ಜೊತೆ ರೌಡಿಗಳು ಹವಾಲಾ ಹಣ ಹಂಚುತ್ತಿದ್ದಾರೋ ಅಂತಹ ಪುಡಿ ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾನೊಬ್ಬ ಜವಾನ, ಕಾನ್ಸ್‌ಟೇಬಲ್‌:  ನಾನೊಬ್ಬ ಜವಾನ ಮತ್ತು ಕಾನ್ಸ್‌ಟೇಬಲ್‌. ಜನರ ಹಿತಕ್ಕಾಗಿ ಸೇವಕನಾಗಿ ದಿನದ 18 ರಿಂದ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಜನರ ಪ್ರತಿ ಪೈಸೆಯ ಮಹತ್ವ ಮತ್ತು ಜವಾಬ್ದಾರಿ ನನಗೆ ಗೊತ್ತಿದೆ. ನನಗೆ ಜಾತಿ ಇಲ್ಲ. ಅಖಂಡ ಕರ್ನಾಟಕ ಅಭಿವೃದ್ಧಿಯ ಕನಸು ಇದೆ. ಇದನ್ನು ನನಸು ಮಾಡುವ ನಿಟ್ಟಿನಲ್ಲಿ ಪಲಾಯನ ಮಾಡುವುದು ನನ್ನ ಜಾಯಮಾನವಲ್ಲ ಎಂದು ಹೇಳಿದರು.

ಪರ್ಸಂಟೇಜ್‌ ಜನಕ ಯಡಿಯೂರಪ್ಪ 

ಸರ್ಕಾರದಲ್ಲಿ ಪರ್ಸಂಟೇಜ್‌ ವ್ಯವಸ್ಥೆ ಜಾರಿಗೆ ತಂದವರೇ ಯಡಿಯೂರಪ್ಪ. ಅವರು ಪರ್ಸಂಟೇಜ್‌ನ ಜನಕ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ವಿವಾದಕ್ಕೆ ಯಡಿಯೂರಪ್ಪ ಅವರೇ ಕಾರಣಕರ್ತರು. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಇತಿಹಾಸ ಏನೆಂಬುದು ಗೊತ್ತಿದೆ. ಅದನ್ನು ಬಿಚ್ಚಿಟ್ಟರೆ ಏನೆಲ್ಲಾ ಆಗುತ್ತದೆ ಎಂಬುದು ಗೊತ್ತಿಲ್ಲವೇ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ಬಿಡಬೇಕು. ಇಲ್ಲದಿದ್ದರೆ ಅವರಿಗೆ ಅದು ತಿರುಗುಬಾಣವಾಗಲಿದೆ ಎಂದು ಟೀಕಾಪ್ರಹಾರ ನಡೆಸಿದರು.

ಹಿಂದೆ 2008ರಲ್ಲಿ ಹುಬ್ಬಳ್ಳಿಯಲ್ಲಿ ಅಪ್ಪ-ಮಕ್ಕಳನ್ನು ಜೈಲಿಗೆ ಕಳುಹಿಸುವುದೇ ಗುರಿ ಎಂದು ಹೇಳಿದ್ದರು. ಆದರೆ, ಜೈಲಿಗೆ ಹೋದವರು ಯಾರು? ನಮ್ಮ ಕುಟುಂಬವನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿ ಅವರೇ ಜೈಲಿಗೆ ಹೋಗಿಬಂದರು. ಈಗ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಅಪ್ಪ-ಮಕ್ಕಳು ಲೂಟಿಕೋರರು ಎಂದು ಹೇಳುತ್ತಾ ತಿರುಗುತ್ತಿದ್ದಾರೆ. ಯಾವ ರೀತಿಯಲ್ಲಿ ಲೂಟಿ ಮಾಡಿದ್ದೇವೆ ಎಂಬುದನ್ನು ಹೇಳಬೇಕು. ಸರ್ಕಾರದ ಸಂಪತ್ತನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಲೂಟಿ ಮಾಡುವ ಪ್ರಯತ್ನ ನಾವು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.