ಬೆಂಗಳೂರು, [ಸೆ.29]:  ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್​ ಕದ್ದಾಲಿಕೆ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ಮಠಾಧೀಶರು, ರಾಜಕಾರಣಿಗಳು, ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಪೋನ್ ಟ್ಯಾಪಿಂಗ್ ಮಾಡಲಾಗಿದೆ ಎನ್ನುವುದು ಮೇಲ್ನೊಟಕ್ಕೆ ತಿಳಿದುಬಂದಿದೆ.

ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪ್ : ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್​ ಕೂಡ ಕದ್ದಾಲಿಕೆ ಆಗಿದೆ ಎಂದು ಹೇಳಲಾಗಿದೆ. ಇನ್ನು  ಈ ಬಗ್ಗೆ  ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರು  ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 

ನನ್ನ ಅಧಿಕಾರ ಅವಧಿಯಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ಫೋನ್​ ಟ್ಯಾಪಿಂಗ್ ನಡೆದಿತ್ತು ಎಂಬ ವರದಿ, ಅದಕ್ಕೆ ಸಂಬಂಧಿದಂತೆ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವನ್ನುಂಟು ಮಾಡಿವೆ. ಎಲ್ಲದಕ್ಕೂ ಮಿಗಿಲಾಗಿ ಸ್ವಾಮೀಜಿಗಳಿಗೆ ಇದರಿಂದ ಉಂಟಾಗಿರುವ ಬೇಸರ ನನ್ನ ನೋವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ನಿರ್ಮಲಾನಂದರು ನನಗೆ ನೈತಿಕ ಬಲವಾಗಿದ್ದವರು. ತಮ್ಮ ಸಾಮಾಜಿಕ ಕಾರ್ಯಗಳ ನೆರಳಿನಲ್ಲಿ ನನಗೆ ಮಾರ್ಗದರ್ಶನ ಮಾಡಿದವರು. ನನಗಾಗಿ ಕಾಲಭೈರವನನ್ನು ಪ್ರಾರ್ಥಿಸಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಖಂಡಿತ ಸಾಧ್ಯವಿಲ್ಲ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಆಗದಿರುವ ತಪ್ಪೊಂದಕ್ಕೆ ಆರ್​. ಅಶೋಕ್​ ಅವರು ಎಲ್ಲರಿಗಿಂತಲೂ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ ಎಂದು ಪೋಸ್ಟ್ ಮಾಡಿದ್ದಾರೆ.