ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಿಢೀರ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರು, [ಮೇ.24]: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಹೀನಾಯ ಸೋಲಾಗಿದೆ. ಬಿಜೆಪಿ 25 ಸ್ಥಾನಗಳನ್ನು ಗೆದ್ರೆ, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಗೆದ್ದಿವೆ.
ಈ ಹೀನಾಯ ಸೋಲಿನಿಂದ ಮೈತ್ರಿ ನಾಯಕರು ಫುಲ್ ಸೈಲೆಂಟ್ ಆಗಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಇಂದು [ಶುಕ್ರವಾರ] ಪ್ರತ್ಯೇಕವಗಿ ಸಭೆಗಳ ಮೇಲೆ ಸಭೆ ನಡೆಸಿದರು.
ಕಾಂಗ್ರೆಸ್ ಪರಾಮರ್ಶೆ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರನ್ನೇ ಸಿಎಂ ಆಗಿ ಮುಂದುವರಿಸಲು ನಿರ್ಧರಿಸಲಾಗಿದೆ. ಅಲ್ದೇ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿರೋ ಅತೃಪ್ತ ಶಾಸಕರನ್ನು ಮನವೊಲಿಸುವುದು, ಮುಂದಿನ ದಿನಗಳಲ್ಲಿ ರೆಬೆಲ್ಸ್ ಶಾಸಕರ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ದೋಸ್ತಿ ಟೀಂ ಮುಂದಾಗಿದೆ.
ಈ ಮಧ್ಯೆ ಜೆಡಿಎಸ್ ಸಭೆ ಮುಕ್ತಾಯವಾಗುತ್ತಿದ್ದಂತೆಯೇ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ದಿಢೀರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. ಇಂದು [ಶುಕ್ರವಾರ] ರಾತ್ರಿ ಸಿದ್ದು ಅವರ ಕಾವೇರಿ ನಿವಾಸಕ್ಕೆ ಕುಮಾರಸ್ವಾಮಿ ತೆರಳಿ ಭೇಟಿ ಮಾಡಿದ್ದು, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತಿದೆ. ಒಂದು ವೇಳೆ, ಬಿಜೆಪಿ ಆಪರೇಷನ್ ಕಮಲ ನಡೆಸಿ ಸರ್ಕಾರ ಬೀಳಿಸಬಹುದು ಎನ್ನುವ ಆತಂಕ ಮೈತ್ರಿ ನಾಯಕರಲ್ಲಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
