ಬೆಂಗಳೂರು :  ‘ಜನ ಆಶೀರ್ವದಿಸಿದರೆ ಮತ್ತೆ ಮುಖ್ಯ ಮಂತ್ರಿಯಾಗುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಸೃಷ್ಟಿಸಿದ ತಲ್ಲಣ ತಣ್ಣಗಾಗುವ ಮೊದಲೇ ಈಗ ಮುಖ್ಯಮಂತ್ರಿ  ಕುಮಾರಸ್ವಾಮಿ ಹೊಸತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. ಸಿದ್ದು  ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹಿರಿಯರಾದ ಸಚಿವ ಆರ್.ವಿ.ದೇಶಪಾಂಡೆ ಅವರೂ ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಬಯಸುತ್ತಾರೆ. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಭೇಟಿ ನಂತರ ನೇರವಾಗಿ ಕರ್ನಾಟಕ ಭವನಕ್ಕೆ ಆಗಮಿಸಿದ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಕಂದಾಯ ಸಚಿವ ದೇಶಪಾಂಡೆ ಅವರೂ ದೆಹಲಿ ಏರ್‌ಪೋರ್ಟಿಂದ ನೇರವಾಗಿ ಕಾರಿನಿಂದಿಳಿದು ಬಂದು ಮುಖ್ಯಮಂತ್ರಿಗೆ ಜತೆಯಾದರು.

ಅಷ್ಟೊತ್ತಿಗೆ ಪತ್ರಕರ್ತರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿರುವ ಬಗ್ಗೆ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಕೇಳಿದರು. ಕುಮಾರಸ್ವಾಮಿ ಪ್ರತಿಕ್ರಿಯಿಸು ತ್ತಿದ್ದಂತೆ ದೇಶಪಾಂಡೆ ತಕ್ಷಣ ಮಧ್ಯಪ್ರವೇಶಿಸಿ ತಾವೇನೋ ಹೇಳಲು ಮುಂದಾದರು. ಆಗ ಕುಮಾರಸ್ವಾಮಿ ಅವರು ಈ ವಿಚಾರ ಪ್ರಸ್ತಾಪಿಸಿದರು. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ನನಗೆ ಆರ್ಹತೆ ಇದೆ. ಆದರೆ ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಬೇಸರವಿಲ್ಲ ಎಂದು ಹೇಳಿದರು.