ಹೊಸ ಬಾಂಬ್ ಬಿಜೆಪಿ ಗೆಲುವಿಗೆ, ಕಾಂಗ್ರೆಸ್ ಸೋಲಿಗೆ ಸಿದ್ದು ತಂತ್ರ  

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ನಡೆದಾಗ ಬಿಜೆಪಿ ಗೆಲುವಿಗೆ ಹಾಗೂ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಯಾರೊಂದಿಗೆ ವ್ಯವಹಾರ ನಡೆಸಿದ್ದರು ಎಂಬುದನ್ನು ಶೀಘ್ರ ಮುಖ್ಯಮಂತ್ರಿಗಳ ಸ್ನೇಹಿತರೇ ಬಹಿರಂಗ ಪಡಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ತನ್ಮೂಲಕ ಆಪರೇಷನ್ ಕಮಲಕ್ಕೆ ಆಗ ಕಾಂಗ್ರೆಸ್‌ನಲ್ಲಿದ್ದ ಸಿದ್ದರಾಮಯ್ಯ ಅವರೇ ಕುಮ್ಮಕ್ಕು ನೀಡಿದ್ದರು ಎಂದು ಅವರು ಪರೋಕ್ಷವಾಗಿ ಆರೋಪ ಮಾಡಿದ್ದಾರೆ.

ಶನಿವಾರ ಪಕ್ಷದ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಪರೇಷನ್ ಕಮಲವನ್ನು ನಾನು ಕಟುವಾಗಿ ವಿರೋಧಿಸಿ ಕಡಿವಾಣ ಹಾಕಿದ್ದೆ. ಆದರೆ, ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಸಿದ್ದರಾಮಯ್ಯ ಆಪರೇಷನ್ ಕಮಲ ನಡೆ ದಾಗ ಕಾಂಗ್ರೆಸ್ ಸೋಲಿಗೆ ಮತ್ತು ಬಿಜೆಪಿ ಗೆಲುವಿಗೆ ನಡೆಸಿದ್ದ ವ್ಯವಹಾರವೇನು ಮತ್ತು ಸಿದ್ದರಾಮಯ್ಯ ಆಣತಿಯಂತೆ ಯಾರು ಯಾರನ್ನು ಭೇಟಿ ಮಾಡಿದ್ದರು ಎಂಬುದನ್ನು ಸಿಎಂ ಅವರ ಸ್ನೇಹಿತರು ಶೀಘ್ರದಲ್ಲೇ ಬಯಲು ಮಾಡಲಿದ್ದಾರೆ ಎಂದು ಕಿಡಿಕಾರಿದರು.

ಇತ್ತೀಚೆಗೆ ನಡೆಸಿದ ತಾವು ದಲಿತರೊಂದಿಗಿನ ಸಂವಾದ ಕುರಿತು ಮತ್ತು ಜೆಡಿಎಸ್ ಪಕ್ಷದ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಿದ್ದಾರೆ. ಪಕ್ಷವು ಅಧಿಕಾರಕ್ಕೆ ಬಂದರೆ ದಲಿತರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದೇವೆ. ಆದರೆ, ಸಿದ್ದರಾಮಯ್ಯ ಅವರು ಅಂತಹ ಯಾವುದೇ ಘೋಷಣೆ ಮಾಡದೆ, ಮುಂದೆಯೂ ತಾವೇ ಮುಖ್ಯಮಂತ್ರಿ ಎಂಬುದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ದಲಿತರನ್ನು ಅಹುತಿ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ದೌರ್ಬಲ್ಯವನ್ನೇ ಬಂಡವಾಳವನ್ನಾಗಿಸಿಕೊಂಡು ಇಡೀ ಪಕ್ಷವನ್ನೇ ಹೈಜಾಕ್ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.