ಬೆಂಗಳೂರು :  ನರೇಂದ್ರ ಮೋದಿ ಹವಾ ಹಬ್ಬಿದ್ದರಿಂದ ದೇಶಾದ್ಯಂತ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ, ಮಾಧ್ಯಮಗಳು ಎಚ್‌.ಡಿ. ದೇವೇಗೌಡರ ಸೋಲನ್ನೇ ದೊಡ್ಡದು ಮಾಡುತ್ತಿರುವುದು ಏಕೆ? ದೇವೇಗೌಡರೇನು ಆಕಾಶದಿಂದ ಇಳಿದವರೇ ಎಂದು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಪ್ರಶ್ನೆ ಮಾಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರ ಸೋಲನ್ನೇ ಏಕೆ ದೊಡ್ಡದು ಮಾಡುತ್ತಿದ್ದೀರಿ. ಕೋಲಾರದಲ್ಲಿ ಕೆ.ಎಚ್‌. ಮುನಿಯಪ್ಪ ಸೋತಿಲ್ಲವೇ? ಮಲ್ಲಿಕಾರ್ಜುನ ಖರ್ಗೆಯವರು ಸೋತಿಲ್ಲವೇ? ವೀರಪ್ಪ ಮೊಯ್ಲಿ ಅವರು ಸೋತಿಲ್ಲವೇ? ಅವರ ಸೋಲಿನ ಬಗ್ಗೆ ನೀವು ಏಕೆ ಮಾತನಾಡುತ್ತಿಲ್ಲ. ದೇವೇಗೌಡರೇನು ಆಕಾಶದಿಂದ ಇಳಿದವರೇ? ಅಥವಾ ಹಿಂದೆ ಯಾವತ್ತೂ ಅವರು ಸೋತೇ ಇಲ್ಲವೇ ಎಂದು ಪ್ರಶ್ನಿಸಿದರು.

ಮೈತ್ರಿ ಕಾರ್ಯಕರ್ತರು ಒಪ್ಪಬೇಕಲ್ಲ:

ನಾನು ದೇವೇಗೌಡರನ್ನು ಸೇರಿದಂತೆ ಯಾವ ಹಿರಿಯ ನಾಯಕರ ಬಗ್ಗೆಯೂ ನಿಂದಿಸಿಲ್ಲ. ನಾನು ವ್ಯವಸ್ಥೆಯನ್ನು ನಿಂದನೆ ಮಾಡುವವನೇ ಹೊರತು ವ್ಯಕ್ತಿಯನ್ನಲ್ಲ. ರಾಜಕಾರಣದಲ್ಲಿ ಇಂದಿರಾ ಗಾಂಧಿಯವರೇ ಸೋತಿದ್ದರು. ನಮ್ಮ ಸಮಸ್ಯೆಗಳು ಇದ್ದರೆ ತಿದ್ದುವುದಕ್ಕೆ ಜನರು ಹೀಗೆ ಮಾಡಿರಬಹುದು. ಮೈತ್ರಿಯನ್ನು ನಾವು ಒಪ್ಪಿಕೊಂಡರೂ ಕಾರ್ಯಕರ್ತರು ಒಪ್ಪಿಕೊಳ್ಳಬೇಕಲ್ಲವೇ. ಅವರು ಇಲ್ಲಿಯವರೆಗೂ ಪರಸ್ಪರ ಹೊಡೆದಾಡಿಕೊಂಡು ಇರುತ್ತಾರೆ. ಹೀಗಾಗಿ ಮೈತ್ರಿ ಸಾಧಿಸಲು ಕಷ್ಟವಾಯಿತು. ಐದು ತಿಂಗಳ ಮೊದಲೇ ಮೈತ್ರಿ ಮಾಡಿಕೊಂಡಿದ್ದರೆ ಹೊಂದಾಣಿಕೆ ಆಗುತ್ತಿತ್ತು ಎಂದು ಹೇಳಿದರು.