ಬೆಂಗಳೂರು :  ಕಾಂಗ್ರೆಸ್‌ ನಾಯ​ಕ​ತ್ವ​ವು ಆಖೈ​ರು​ಗೊ​ಳಿಸಿ ನೇಮಕ ಆದೇಶ ಹೊರ​ಡಿ​ಸು​ವಂತೆ ಕೋರಿ ಕಳು​ಹಿ​ಸಿದ 20 ನಿಗಮ ಮಂಡಳಿ ಅಧ್ಯಕ್ಷರ ನೇಮ​ಕಾತಿ ಪಟ್ಟಿಗೆ ಇದೀಗ ಜೆಡಿಎಸ್‌ನ ವರಿಷ್ಠ ನಾಯಕ ಎಚ್‌.ಡಿ.ದೇವೇ​ಗೌ​ಡ​ರಿಂದ ದೊಡ್ಡ ಬ್ರೇಕ್‌ ಬಿದ್ದಿದೆ. 

ಮುಖ್ಯಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ವಿದೇ​ಶ​ದಿಂದ ಹಿಂತಿ​ರು​ಗಿದ ನಂತರ ಸಮಾ​ಲೋ​ಚನೆ ನಡೆಸಿ ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ನಿಗ​ಮ ಮಂಡ​ಳಿಯ ಪಟ್ಟಿಯನ್ನು ಏಕ​ಕಾ​ಲ​ದಲ್ಲಿ ಪ್ರಕ​ಟಿ​ಸು​ವು​ದಾಗಿ ಶನಿ​ವಾರ ದೇವೇ​ಗೌ​ಡರು ಘೋಷಣೆ ಮಾಡುವ ಮೂಲಕ ಸದ್ಯಕ್ಕೆ ಕಾಂಗ್ರೆ​ಸ್ಸಿನ ಪಟ್ಟಿಗೆ ಮೋಕ್ಷ​ವಿಲ್ಲ ಎಂಬ ಸ್ಪಷ್ಟಸಂದೇಶ ನೀಡಿ​ದ್ದಾ​ರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿ​ಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರ​ತು​ಪ​ಡಿಸಿ ನಿಗಮ ಮಂಡಳಿ ವಿಚಾ​ರ​ದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ನಡುವೆ ಯಾವುದೇ ಭಿನ್ನಾ​ಭಿ​ಪ್ರಾ​ಯ​ವಿಲ್ಲ ಎಂದು ಹೇಳಿದರು. ಆದರೆ, ಕುಮಾ​ರ​ಸ್ವಾಮಿ ವಿದೇ​ಶ​ದಿಂದ ಹಿಂತಿ​ರು​ಗಿದ ನಂತರ ಜೆಡಿ​ಎಸ್‌ ಪಟ್ಟಿಅಂತಿ​ಮ​ಗೊ​ಳಿಸಲಾ​ಗು​ವುದು ಮತ್ತು ಅನಂತರ ಸಮ​ನ್ವಯ ಸಮಿ​ತಿ​ಯಲ್ಲಿ ಈ ಬಗ್ಗೆ ಮತ್ತೊಮ್ಮೆ ಸಮಾ​ಲೋ​ಚನೆ ಮಾಡ​ಲಾ​ಗು​ವುದು ಎಂದು ಹೇಳುವ ಮೂಲಕ ಕಾಂಗ್ರೆ​ಸ್‌ನ ಪೂರ್ತಿ ಪಟ್ಟಿಯು ಮತ್ತೊಮ್ಮೆ ಪರಾ​ಮ​ರ್ಶೆಗೆ ಒಳ​ಪ​ಡ​ಲಿದೆ ಎಂಬು​ದನ್ನೂ ಸೂಚ್ಯವಾಗಿ ತಿಳಿಸಿದರು.

ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿದ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುಪ್ರೀಂಕೋರ್ಟ್‌ನ ಮಾರ್ಗಸೂಚಿಯಂತೆ ತಜ್ಞರ ನೇಮಕವಾಗಬೇಕು. ಈ ಒಂದು ಮಂಡಳಿ ಹೊರತುಪಡಿಸಿ ಬೇರಾವ ನಿಗಮ-ಮಂಡಳಿಗೆ ಜೆಡಿಎಸ್‌ ಆಕ್ಷೇಪ ಇಲ್ಲ. ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಉಭಯ ಪಕ್ಷದಲ್ಲಿ ಗೊಂದಲ ಇದೆಯಾದರೂ, ಯಾವುದೇ ರೀತಿಯಲ್ಲಿಯೂ ಅಸಮಾಧಾನ, ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜ.3ರಂದು ಜೆಡಿಎಸ್‌ ಶಾಸಕರು, ಮಾಜಿ ಶಾಸಕರು ಸೇರಿದಂತೆ ಮುಖಂಡರ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ನಿಗಮ-ಮಂಡಳಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಗುವುದು. ಶೀಘ್ರದಲ್ಲಿಯೇ ಜೆಡಿಎಸ್‌ನಲ್ಲಿ ಖಾಲಿ ಇರುವ ಎರಡು ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಶೀಘ್ರದಲ್ಲಿಯೇ ಪಟ್ಟಿಅಂತಿಮಗೊಳಿಸಿ ಎರಡೂ ಪಕ್ಷಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಮಾಡಲು ಸುಪ್ರೀಂಕೋರ್ಟ್‌ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಅನವಶ್ಯಕ ಚರ್ಚೆ ಬೇಡ. ಅಲ್ಲದೇ, ಅನಗತ್ಯ ಹೇಳಿಕೆಗಳನ್ನು ಸಹ ನೀಡುವುದು ಬೇಡ. ಮಾಲಿನ್ಯ ನಿಯಂತ್ರಣ ಮಂಡಳಿ ವಿಚಾರದಲ್ಲಿ ಎರಡೂ ಪಕ್ಷದ ಮುಖಂಡರು ಚರ್ಚಿಸಿ ಅಂತಿಮಗೊಳಿಸುತ್ತೇವೆ ಎಂದು ಶಾಸಕ ಡಾ.ಸುಧಾಕರ್‌ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಕಾಂಗ್ರೆಸ್‌ಗೆ 20 ಸ್ಥಾನ, ಜೆಡಿಎಸ್‌ಗೆ 10 ಸ್ಥಾನ ಲಭ್ಯವಾಗಿವೆ. ಜ.3ರಂದು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪಕ್ಷದ ಪಟ್ಟಿಚರ್ಚೆ ಮಾಡಲಾಗುತ್ತದೆ. ಅಲ್ಲದೇ, ಸಮನ್ವಯ ಸಮಿತಿಯಲ್ಲಿಯೂ ಮತ್ತೊಮ್ಮೆ ಈ ಬಗ್ಗೆ ಚರ್ಚಿಸಲಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದಂತೆ ಸಮಸ್ಯೆಯನ್ನು ಬಗೆಹರಿಸಲಾಗುವುದು. ಮಾಧ್ಯಮಗಳು ಇಲ್ಲದ ಉಹಾಪೋಹ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಈ ಬಗ್ಗೆ ಉಭಯ ಪಕ್ಷದ ನಾಯಕರು, ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಕಳೆದ 2006ರಲ್ಲಿ ದಿವಂಗತ ಧರಂಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು. ಮತ್ತೆ ಈಗ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಗೃಹ ಖಾತೆಯಿಂದ ಕೈಬಿಟ್ಟಿದ್ದಕ್ಕೆ ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ, ಅವರ ಪಕ್ಷದ ನಿರ್ಧಾರವು ಅವರಿಗೆ ಸೇರಿದೆ. ರೇವಣ್ಣ ಅವರು ತಮ್ಮ ಅನಿಸಿಕೆಯನ್ನು ಮಾತ್ರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ನಿರ್ಧಾರವನ್ನು ಪ್ರಶ್ನಿಸುವಂತೆ ಮಾತನಾಡಿಲ್ಲ. ಅದು ಮಾಧ್ಯಮಗಳ ತಪ್ಪು ಗ್ರಹಿಕೆ ಎಂದು ಹೇಳಿದರು.

ಸಭಾಪತಿ ಸ್ಥಾನಕ್ಕೆ ಸಿಗದಿದ್ದಕ್ಕೆ ವಿಧಾನಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಅವರು, ಅಂತಿಮ ಕ್ಷಣದವರೆಗೆ ಸಭಾಪತಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತು. ಆದರೆ, ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಸಂಚಕಾರ ತಂದುಕೊಳ್ಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.