ಬೆಂಗಳೂರು ನಗರದಲ್ಲಿ 2014ರ ಅಕ್ಟೋಬರ್‌ನಲ್ಲಿ ಮಳೆ ಬಂದಿದ್ದ ವೇಳೆ ಬಿಳೇಕಳ್ಳಿಯಲ್ಲಿ ತೆರೆದ ಚರಂಡಿಯಲ್ಲಿ ಬಾಲಕಿ ಗೀತಾಲಕ್ಷ್ಮೀ ಎಂಬುವರು ಬಿದ್ದು ಪ್ರಾಣ ಕಳೆದುಕೊಂಡ ಘಟನೆಯ ಹಿನ್ನೆಲೆಯಲ್ಲಿ ತೆರೆದ ಚರಂಡಿ ಮುಚ್ಚದ ಅಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸುವಂತೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು(ಜೂ.02): ನಗರದಲ್ಲಿನ ತೆರೆದ ಚರಂಡಿಗಳನ್ನು ಮುಚ್ಚಲು ಮತ್ತು ಈ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಬೆಂಗಳೂರು ನಗರದಲ್ಲಿ 2014ರ ಅಕ್ಟೋಬರ್ನಲ್ಲಿ ಮಳೆ ಬಂದಿದ್ದ ವೇಳೆ ಬಿಳೇಕಳ್ಳಿಯಲ್ಲಿ ತೆರೆದ ಚರಂಡಿಯಲ್ಲಿ ಬಾಲಕಿ ಗೀತಾಲಕ್ಷ್ಮೀ ಎಂಬುವರು ಬಿದ್ದು ಪ್ರಾಣ ಕಳೆದುಕೊಂಡ ಘಟನೆಯ ಹಿನ್ನೆಲೆಯಲ್ಲಿ ತೆರೆದ ಚರಂಡಿ ಮುಚ್ಚದ ಅಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸುವಂತೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ತೆರೆದ ಚರಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ. ಹಾಗಾದರೆ ಆ ಕೆಲಸ ಮಾಡಬೇಕು. ಹಾಗೆಯೇ, ತೆರೆದ ಚರಂಡಿ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಸೂಚಿಸಿತು.
ಬಳಿಕ ಮುಂದಿನ ವಿಚಾರಣೆ ವೇಳೆ ತೆರೆದ ಚರಂಡಿ ಮುಚ್ಚಿದ ಮತ್ತು ಈ ವಿಚಾರದಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿರುವ ಬಗ್ಗೆ ಪ್ರಗತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೆ, ಅಗತ್ಯವಿದ್ದರೆ ಚರಂಡಿಗಳ ನಿರ್ವಹಣೆ ಸಂಬಂಧ ಮೇಲ್ವಿಚಾರಣೆಗಾಗಿ ಸಮಿತಿ ನೇಮಕ ಮಾಡಲು ಆದೇಶಿಸಲಾಗುವುದು ತಿಳಿಸಿ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ನಗರದಲ್ಲಿ ತೆರೆದ ಚರಂಡಿಗಳನ್ನು ಮುಚ್ಚುವಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಹೀಗಾಗಿ, ತೆರೆದ ಚರಂಡಿ ಮುಚ್ಚಲು ಬಿಬಿಎಂಪಿಗೆ ಆದೇಶಿಸಬೇಕು. ಈ ವಿಷಯದಲ್ಲಿ ಕರ್ತವ್ಯಲೋಪ ಎಸಗಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸುವುದಕ್ಕೆ ಆದೇಶಿಸಲು ಅರ್ಜಿಯಲ್ಲಿ ಕೋರಿರುವುದಾಗಿ ತಿಳಿಸಿದರು.
ಅಲ್ಲದೆ, ತೆರೆದ ಚರಂಡಿ ಮುಚ್ಚುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಕಳೆದ ವರ್ಷ ನವೆಂಬರ್ನಲ್ಲಿ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಆದೇಶ ಪ್ರಕಟಗೊಂಡು ಎಂಟು ತಿಂಗಳು ಕಳೆದರೂ ಸರ್ಕಾರ ಹಾಗೂ ಬಿಬಿಎಂಪಿ ತೆರೆದ ಚರಂಡಿ ಮುಚ್ಚಿದ ಹಾಗೂ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿದ ಬಗ್ಗೆ ವರದಿ ಸಲ್ಲಿಸಿಲ್ಲ ಎಂದು ದೂರಿದರು.
