ಹಾಸನ (ಏ. 30): ಜಿಲ್ಲೆಯ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆಯಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ಸ್ ಅವರು ಬಿಜೆಪಿ ಪಕ್ಷದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿರುವ ಅವರು ವರ್ಗಾವಣೆ ಮಾಡದಿದ್ದಲ್ಲಿ ಮತ ಎಣಿಕೆ ಕಾರ್ಯ ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಯಬೇಕೆಂದು ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಪತ್ರ ಬರೆದಿರುವುದಾಗಿ ತಿಳಿಸಿದರು.

ಆರ್‌ಟಿಒಗೆ ಕಿರುಕುಳ:

ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವ ಮೇರಿ ಫ್ರಾನ್ಸಿಸ್ ತಾವು ಹೇಳಿದಂತೆ ಕೇಸ್ ಹಾಕದ ಆರ್‌ಟಿಓಗೆ ಇಲ್ಲದ ಕಿರುಕುಳ ನೀಡಿದರು. ಇದರಿಂದ ಅವರಿಗೆ ಲಘು ಹೃದಯಾಘಾತವಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು ಎಂದರು. ಮತದಾನದ ಮಾರನೇ ದಿನ ಅಂದರೆ ಏ.19 ರಂದು ಜಿಲ್ಲಾಧಿಕಾರಿಗಳು ಎಲ್ಲಾ ಪಕ್ಷಗಳ ಏಜೆಂಟ್‌ಗಳ ಸಭೆಯನ್ನು ಇಬ್ಬರು ಮುಖ್ಯ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಸಭೆ ನಡೆಸಿದ್ದರು. ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಸಭೆಯಲ್ಲಿ ನಿರ್ಣಯಿಸಿ, ಮುಖ್ಯ ಚುನಾವಣಾ ಆಯುಕ್ತರಿಗೆ ವರದಿ ಕಳುಹಿಸಿದ್ದರು. ಆದರೆ ಏ.24 ರಂದು ಮಾರ್ಗೋಡನಹಳ್ಳಿಯ ರಾಜು ಮತ್ತು ಮಾಯಣ್ಣ ಎಂಬವರಿಂದ ಅಕ್ರಮ ನಡೆದಿದೆ ಎಂದು ಜಿಲ್ಲಾಧಿಕಾರಿಯೇ ಅರ್ಜಿ ಬರೆಸಿಕೊಂಡು
ವೀಕ್ಷಕರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಿ, ಕ್ರಮ ಜರುಗಿಸುತ್ತಾರೆ ಎಂದು ದೂರಿದರು.

ನನಗೆ ಮೊಮ್ಮಕ್ಕಳೇ ಇಲ್ಲ:

ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ದೂರು ನೀಡಿದ ರಾಜು ಎಂಬಾತ ಬೇರೆ ಊರಿನ ವ್ಯಕ್ತಿ. ಆತನನ್ನು ಏಕೆ? ಹೇಗೆ? ಮತಗಟ್ಟೆ ಏಜೆಂಟ್ ಮಾಡಲಾಯಿತು ಎಂದು ಪ್ರಶ್ನಿಸಿದರು. ನನ್ನ ಮಗ ಡಾ.ಸೂರಜ್‌ಗೆ ಮಕ್ಕಳೇ ಆಗಿಲ್ಲ. ಆದರೂ ಮತಗಟ್ಟೆಯಲ್ಲಿ ರೇವಣ್ಣನವರ ಮೂರು ವರ್ಷದ ಮೊಮ್ಮಗಳು ಇದ್ದಳು ಎಂದು ಜಿಲ್ಲಾಧಿಕಾರಿ ವರದಿ ಮಾಡುತ್ತಾರೆ. ಅಲ್ಲದೆ ಪ್ರೊಬೆಷನರಿ ಡಿಸಿ ಪ್ರಿಯಾಂಗ್ ಮತ್ತು ಜಿಲ್ಲಾಧಿಕಾರಿ ಮೇರಿ ಫ್ರಾನಿಸ್ಸ್ ಅವರು ಮೊಬೈಲ್ ಕರೆ ಮಾಡದೆ ವಾಟ್ಸಪ್ ಕಾಲ್‌ನಲ್ಲಿ ಮಾತನಾಡಿರುವ ಉದ್ದೇಶ ಏನು ಎಂದು ಆಗ್ರಹಿಸಿದರು.