ಚಂಡೀಗಢ: ಇನ್ನು ಮುಂದಿನ ದಿನಗಳಲ್ಲಿ ಹರಾರ‍ಯಣದ ಭತ್ತದ ಬೆಳೆಯುವ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಮಾಡಬೇಕಿಲ್ಲ. ಆದರೆ, ಹರಾರ‍ಯಣದ ರಾಜ್ಯ ಸರ್ಕಾರ ಭತ್ತ ಬೆಳೆಯುವ ರೈತರಿಗೆ ಪ್ರತೀ ಹೆಕ್ಟರ್‌(2.50 ಎಕರೆ) ಜಮೀನಿಗೆ 10,000 ರು. ನೀಡಲಿದೆ. ಹಾಗಂತ, ರೈತರು ಉಳಿಮೆ ಮಾಡದೆ ಸುಮ್ಮನಿದ್ದರೆ ಈ ಹಣ ಸಿಗಲ್ಲ. ಬದಲಿಗೆ, ಭತ್ತಕ್ಕೆ ಪರ್ಯಾಯವಾಗಿ ಇತರೆ ಬೆಳೆಗಳನ್ನು ಬೆಳೆಯುವ ರೈತರಿಗೆ 10000 ರು. ಅನ್ನು ಪ್ರೋತ್ಸಾಹಕವಾಗಿ ನೀಡಲಾಗುತ್ತದೆ.

ಅತಿಹೆಚ್ಚು ಭತ್ತದ ಫಸಲು ತೆಗೆಯುವ ರಾಜ್ಯಗಳ ಪೈಕಿ ಸದ್ಯ ಹರಾರ‍ಯಣವೂ ಒಂದಾಗಿದೆ. ಆದರೆ, ಹೆಚ್ಚು ಭತ್ತದ ಬೆಳೆಯಿಂದಾಗಿ ರಾಜ್ಯಾದ್ಯಂತ ಅಂತರ್ಜಲ ಮಟ್ಟಗಂಭೀರ ಪ್ರಮಾಣದಲ್ಲಿ ಕುಸಿತವಾಗುತ್ತಿದೆ. ಹೀಗಾಗಿ, ಅಂತರ್ಜಲ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು, ಭತ್ತದ ಬೆಳೆಗೆ ಪರ್ಯಾಯವಾಗಿ ಮೆಕ್ಕೆಜೋಳ, ದ್ವಿದಳ ದಾನ್ಯಗಳು, ಎಣ್ಣೆಕಾಳು ಬೆಳೆಗಳಿಗೆ ಸಂಬಂಧಿಸಿದ ಕೃಷಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ಪ್ರತೀ ಹೆಕ್ಟರ್‌ ಪ್ರದೇಶಕ್ಕೆ 10000 ರು. ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹರಾರ‍ಯಣದ 22 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ ಈಗಾಗಲೇ ಈ ಮಹತ್ವದ ಯೋಜನೆ ಕಾರ್ಯಗತಗೊಂಡಿದೆ. ಅಂತರ್ಜಲ ರಕ್ಷಣೆ ನಿಟ್ಟಿನಲ್ಲಿ ಹರ್ಯಾಣ ದೇಶದಲ್ಲೇ ಇಂಥ ಯೋಜನೆ ಕೈಗೊಂಡ ಮೊದಲ ರಾಜ್ಯವಾಗಿದೆ.

ಹರಾರ‍ಯಣದ 13.5 ಲಕ್ಷ ಹೆಕ್ಟರ್‌ ಕೃಷಿಭೂಮಿಯಲ್ಲಿ ಪ್ರಸ್ತುತ ಭತ್ತವನ್ನು ಬೆಳೆಯಲಾಗುತ್ತಿದೆ. ಇದೀಗ ಭತ್ತದ ಪರ್ಯಾಯವಾಗಿ ಇತರೆ ಬೆಳೆಗಳನ್ನು ಬೆಳೆಯುವ ರೈತರಿಗೆ 10000 ರು. ನೀಡುವ ಮೂಲಕ ಭತ್ತ ಬೆಳೆಯುವ ಪ್ರದೇಶವನ್ನು 50 ಸಾವಿರ ಹೆಕ್ಟರ್‌ಗೆ ತಗ್ಗಿಸುವ ಮಹತ್ವದ ಗುರಿಯನ್ನು ಖಟ್ಟರ್‌ ಸರ್ಕಾರ ಹಾಕಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಮನೋಹರ ಲಾಲ್‌ ಖಟ್ಟರ್‌ ಅವರು, ‘1970ರವರೆಗೂ ಮೆಕ್ಕೆಜೋಳ ಹಾಗೂ ದ್ವಿದಳ ದಾನ್ಯಗಳನ್ನು ರಾಜ್ಯದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಆದರೆ, ಆ ನಂತರದ ದಿನಗಳಲ್ಲಿ ರಾಜ್ಯದ ರೈತರು ಹೆಚ್ಚು ಭತ್ತ ಮತ್ತು ಗೋಧಿ ಬೆಳೆಯಲು ಆರಂಭಿಸಿದರು. ಇದರಿಂದ ಅಂತರ್ಜಲದ ಪ್ರಮಾಣ ಕುಸಿಯುತ್ತಿದೆ. ಜಲ ಹಾಗೂ ವಿದ್ಯುತ್‌ ಸಂರಕ್ಷಣೆ ನಿಟ್ಟಿನಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.