ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ದುಷ್ಕರ್ಮಿಗಳ ಕುಚೋದ್ಯತನ ಮುಂದುವ ರಿದಿದ್ದು, ಈಗ ಕಿರುತೆರೆ ಕಿರಿಯ ನಟಿಯೊಬ್ಬರು ಕಿಡಿಗೇಡಿ ತನಕ್ಕೆ ತುತ್ತಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು(ಜೂ.06): ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ದುಷ್ಕರ್ಮಿಗಳ ಕುಚೋದ್ಯತನ ಮುಂದುವ ರಿದಿದ್ದು, ಈಗ ಕಿರುತೆರೆ ಕಿರಿಯ ನಟಿಯೊಬ್ಬರು ಕಿಡಿಗೇಡಿ ತನಕ್ಕೆ ತುತ್ತಾಗಿರುವ ಘಟನೆ ಬೆಳಕಿಗೆ ಬಂದಿದೆ.

‘ಮನೆದೇವ್ರು' ಧಾರಾವಾಹಿ ಸಹ ಕಲಾವಿದೆ ಸ್ವಾತಿ ಅವರೇ ಕಿರುಕುಳಕ್ಕೆ ಸಿಲುಕಿದ್ದು, ಈ ಸಂಬಂಧ ಸಿಐಡಿ ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಸೈಬರ್‌ ಠಾಣೆಗೆ ಪ್ರತ್ಯೇಕವಾಗಿ ಅವರು ದೂರು ದಾಖಲಿಸಿದ್ದಾರೆ. ಆದರೆ, ಈ ದೂರಿನ ಬಗ್ಗೆ ಪೊಲೀಸರು ತನಿಖೆ ನಡೆಸದೆ ನಿರ್ಲಕ್ಷಿಸಿದ್ದಾರೆ ಎಂದು ಕಿರುತೆರೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟಿ ಸ್ವಾತಿ ಅವರ ಭಾವಚಿತ್ರ ಬಳಸಿಕೊಂಡು ದುಷ್ಕರ್ಮಿಯೊಬ್ಬ, ಫೇಸ್‌ಬುಕ್‌ನಲ್ಲಿ ನಟಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಈ ಖಾತೆಯಲ್ಲಿ ಆ ನಟಿಯ ಮನೆ ವಿಳಾಸ ಹಾಗೂ ಅವರ ತಂದೆ ಮೊಬೈಲ್‌ ಸಂಖ್ಯೆ ಪ್ರಕಟಿಸಿದ್ದಾನೆ. ಅಲ್ಲದೆ ಅಸಭ್ಯ ಬರಹಗಳನ್ನು ಪೋಸ್ಟ್‌ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು, ನಟಿಗೆ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ‘ಕನ್ನಡಪ್ರಭ'ಕ್ಕೆ ಮಾತನಾಡಿದ ಸ್ವಾತಿ ಅವರು, ಫೇಸ್‌ಬುಕ್‌ನಲ್ಲಿ ನನ್ನದೊಂದು ಅಧಿಕೃತ ಖಾತೆ ಇದೆ. ಈ ಖಾತೆ ಹೊರತುಪಡಿಸಿದರೆ ಫೇಸ್‌ಬುಕ್‌ನಲ್ಲಿ ನಾನು ಮತ್ತೊಂದು ಖಾತೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.ಎರಡು ತಿಂಗಳಿಂದ ಅಪರಿಚಿತ ವ್ಯಕ್ತಿ, ನನ್ನ ಫೋಟೋವನ್ನು ಬಳಸಿಕೊಂಡು ಶೃತಿ ಸೇಠ್‌, ಸ್ವಾತಿ ಸಾನ್ವಿ, ಸ್ವಾತಿ ನಾಗರಾಜ್‌, ಅಜಯ್‌ಕುಮಾರ್‌ ಹಾಗೂ ಚೈತ್ರಗೌಡ ಎಂಬ ಹೆಸರಿನ ನಕಲಿ ಖಾತೆ ತೆರೆದಿದ್ದಾನೆ. ಆ ಖಾತೆ ಮೂಲಕ ನನ್ನ ಕೆಲವು ಸ್ನೇಹಿತರಿಗೆ ಅಸಭ್ಯ ಸಂದೇ ಶಗಳನ್ನು ಕಳುಹಿಸಿದಲ್ಲದೆ ಅಶ್ಲೀಲ ಪೋಟೋಗಳನ್ನು ಪ್ರಕಟಿಸಿದ್ದು, ಈ ಬಗ್ಗೆ ಫೇಸ್‌ಬುಕ್‌ ವ್ಯವಸ್ಥಾಪಕರಿಗೆ ದೂರ ನೀಡಲಾಯಿತು.

ಬಳಿಕ ಆ ನಕಲಿ ಖಾತೆಗಳನ್ನು ಫೇಸ್‌ಬುಕ್‌ ವ್ಯವಸ್ಥಾಪಕರು ಡಿಲೀಟ್‌ ಮಾಡಿದ್ದರು. ಇದಾದ ನಂತರ ಮತ್ತೆ ಕವಿತಾ ನಾಗರಾಜ್‌ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಹೀಗೆ ಈ ಫೇಸ್‌'ಬುಕ್‌ನಲ್ಲಿ ನಿರಂತರವಾಗಿ ಅಪಮಾನಗೊಳಿಸುವ ಸಂದೇಶಗಳನ್ನು ಪ್ರಕಟಿಸಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ವಾತಿ ಅವರು ದೂರಿದ್ದಾರೆ.

ಈ ಕಿರುಕುಳ ಸಂಬಂಧ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಈವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತ ಕಿಡಿಗೇಡಿಗಳ ಕಾಟದಿಂದ ನಾನು ಮಾತ್ರವಲ್ಲದೆ ನಮ್ಮ ಇಡೀ ಕುಟುಂಬವೇ ನೋವು ಅನುಭವಿಸುವಂತಾಗಿದೆ. ಜೀವಭೀತಿ ಸಹ ಎದುರಾಗಿದೆ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ.