ಉಡುಪಿ(ಏ. 27)  ಉಡುಪಿಯ ಪರ್ಕಳದಲ್ಲಿ ಅಪರೂಪದ ತೋಳ ಹಾವು ಕಾಣಿಸಿಕೊಂಡಿದೆ.  ಸೂರಪ್ಪ ಪೂಜಾರಿ ಎಂಬವರ ಮನೆಯಲ್ಲಿ ಈ ಹಾವು ಕಾಣಸಿಕ್ಕಿದೆ.

ಇಲ್ಲಿನ ಗ್ಯಾಡ್ಸನ್ ಕಾಲೋನಿಯಲ್ಲಿ ಅಪರೂಪಕ್ಕೆ ಸಾಮಾನ್ಯ ತೋಳ ಹಾವು (ಕಾಮನ್ ಊಲ್ಫ್ ಸ್ನೇಕ್) ಕಾಣಸಿಕ್ಕಿದೆ. ಇಲ್ಲಿನ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಮನೆಯಲ್ಲಿ ಕಂಡುಬಂದ ಈ ಹಾವನ್ನು ಸ್ಥಳೀಯ ಉರಗಪ್ರೇಮಿಗಳು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಟ್ಟಿದ್ದಾರೆ.

ಸೂರಪ್ಪ ಪೂಜಾರಿ ಅವರು ಶನಿವಾರ ಬೆಳಿಗ್ಗೆ ಏಳುವಾಗ ಹಾಸಿಗೆಯಲ್ಲಿ ಇದ್ದ ಈ ಹಾವನ್ನು ಕಂಡು ಬೆಚ್ಚಿಬಿದ್ದರು. ವಿಷಕಾರಿ ಹಾವಿರಬಹುದು ಎಂದು ಮನೆಯವರೆಲ್ಲರೂ ಗಾಬರಿಯಾದರು, ಆದರೇ ಹಾವು ಯಾವುದೇ ತೊಂದರೆ ಕೊಡದೇ ಒಂದು ಕಡೆ ಮುದುಡಿ ಕುಳಿತಿತ್ತು.

ತಕ್ಷಣ ನೆರೆಮನೆಯ ಗಣೇಶ್ ರಾಜ್ ಅವರು ಬಂದು ಉರಗತಜ್ಞ ಗುರುರಾಜ ಸನಿಲ್ ಅವರಿಗೆ ಮಾಹಿತಿ ನೀಡಿದರು, ವಾಟ್ಸಾಪ್ ಮೂಲಕ ಹಾವಿನ ಫೋಟೋ ಕಳುಹಿಸಿದರು.  ಗುರುರಾಜ್ ಸನಿಲ್ ಅವರು ಫೋಟೋ ನೋಡಿ ಅದು ತೋಳ ಹಾವು, ವಿಷಕಾರಿಯಲ್ಲ, ಕೊಲ್ಲಬೇಡಿ ಎಂದು ಹೇಳಿದರು. ವಾಟ್ಸಾಪ್ ಈ ನಿರುಪದ್ರವಿ ಹಾವಿನ ಪ್ರಾಣ ಉಳಿಸಿತು.

ಗೋಲ್ಡನ್ ಹಾವಿನ ಅಂದವ ನೋಡಿರಾ?

ನಂತರ ಮನೆಯವರು ಹಾವನ್ನು ಒಂದು ಕೋಲಿನಿಂದ ದೊಡ್ಡ ಪ್ಲಾಸ್ಟಿಕ್ ಡಬ್ಬಿಯೊಳಗೆ ತುಂಬಿಸಿದರು. ಗಣೇಶ್ ರಾಜ್ ಅವರು ಅದನ್ನು ಪಕ್ಕದ ಕಾಡಿಗೆ ಸುರಕ್ಷಿತವಾಗಿ ಬಿಟ್ಟುಬಂದರು.      

ಕೊಲ್ಲಬೇಡಿ ಪ್ಲೀಸ್ - ಗುರುರಾಜ್ 
ತೋಳ ಹಾವು ವಿಷಕಾರಿ ಅಲ್ಲ, ಆದರೇ ಮನುಷ್ಯನಿಗೆ ಬಹಳ ಉಪಕಾರಿ ಹಾವು. ಆದರೇ ಅದು ಪಕ್ಕನೆ ನೋಡುವಾಗ ಅತೀ ವಿಷಕಾರಿ ಕಡಂಬಳ ಹಾವು (ಇಂಡಿಯನ್ ಕಾಮನ್ ಕ್ರೈಟ್ ಸ್ನೇಕ್)ದಂತೆಯೇ ಇರುವುದರಿಂದ ಜನರು ಅದನ್ನು ಕೊಲ್ಲುವುದೇ ಜಾಸ್ತಿ ಎಂದು ಉರಗತಜ್ಞ ಗುರುರಾಜ್ ಸನಿಲ್ ವಿಷಾದಿಸಿದ್ದಾರೆ.

ಸೂರಪ್ಪ ಪೂಜಾರಿ ಮನೆಯಲ್ಲಿ ಸಿಕ್ಕಿದ್ದು ಮರಿ ಹಾವು, ಸುಮಾರು 6 ಇಂಚು ಉದ್ದವಿದೆ. ಪ್ರೌಢ ಹಾವು 20 ಇಂಚುವರೆಗೆ ಳೆಯುತ್ತದೆ. ಇವುಗಳ ಮುಖ್ಯ ಆಹಾರವೇ ಹಲ್ಲಿ, ಅದನ್ನು ಹುಡುಕಿಕೊಂಡು ಮನೆಯೊಳಗೆ ಬರುತ್ತವೆ, ಅನೇಕ ಸಲ ಮನೆಯೊಳಗೆ ಹುಟ್ಟಿ ಬೆಳೆದು, ಅಲ್ಲಿಯೇ ಸಾಯುತ್ತವೆ. ಮಾರ್ಚ್ ಏಪ್ರಿಲ್ ನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದ್ದರಿಂದ ಈ ಮರಿ ಪತ್ತೆಯಾಗಿದೆ ಎಂದವರು ಹೇಳಿದ್ದಾರೆ

ಕಡಂಬಳ ಮತ್ತು ತೋಳಹಾವಿಗೆ ಬಹಳ ವ್ಯತ್ಯಾಸ ಇಲ್ಲ, ಆದ್ದರಿಂದ ಈ ನಿರುಪದ್ರವಿ ಹಾವು ತಪ್ಪಾಗಿ ಕೊಲ್ಲಲ್ಪಡುತ್ತದೆ. ಕಡಂಬಳ ಹಾವಿಗೆ ಮೈಮೇಲೆ ಎರಡೆರಡು ಕಟ್ಟುಗಳು ಜೊತೆಯಾಗಿರುತ್ತವೆ, ತಲೆ ಮೇಲೆ ಕಟ್ಟುಗಳಿರುವುದಿಲ್ಲ, ತೋಳಹಾವಿಗೆ ಒಂದೊಂದೇ ಕಟ್ಟುಗಳಿರುತ್ತದೆ, ತಲೆಯ ಮೇಲೆಯೂ ಕಟ್ಟುಗಳಿರುತ್ತವೆ ಎಂದು ಗುರುರಾಜ್ ಹೇಳುತ್ತಾರೆ.

ಹಾವುಗಳ ಜಗತ್ತಿನ ಜೈವಿಕ ಪರಿಸರದ ಮಹತ್ವದ ಕೊಂಡಿಗಳು, ಯಾವುದೇ ಹಾವು ಕಂಡು ಬಂದಾಗ ಕೊಲ್ಲಬೇಡಿ, ತಕ್ಷಣ ಉರಗತಜ್ಞರಿಗೆ ಮಾಹಿತಿ ನೀಡಿ, ಹಾವುಗಳನ್ನು ರಕ್ಷಿಸಿ ಎಂದವರು ವಿನಂತಿಸಿದ್ದಾರೆ.

ಕಂದು ಅಥವಾ ಕಪ್ಪುಬಣ್ಣ ಹೊಂದಿದ್ದು ಅಡ್ಡದಲ್ಲಿ ಬಿಳಿ ಪಟ್ಟೆಗಳನ್ನು ಹೊಂದಿರುತ್ತದೆ. ಆಫ್ರಿಕಾದ ಕಾಡುಗಳಲ್ಲಿ ಈ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಹದಿನೈದರಿಂದ ಇಪ್ಪತ್ತು ವರ್ಷಗಳ ಕಾಲ ಬದುಕಬಲ್ಲ ಈ ಹಾವುಗಳು ಹೆಚ್ಚಾಗಿ ಕೀಟಗಳು ಮತ್ತು ಓತಿಕ್ಯಾತಗಳನ್ನು ತಿಂದು ಬದುಕುತ್ತವೆ.