ಉಡುಪಿ :    ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಗೋಲ್ಡನ್ ಟ್ರೀ ಸ್ನೇಕ್ ಯಾನೆ ಹಾರುವ ಹಾವು ಕರಾವಳಿ ಜಿಲ್ಲೆ ಉಡುಪಿಯಲ್ಲಿ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮರದಿಂದ ಮರಕ್ಕೆ ಸ್ವಲ್ಪ ದೂರದವರೆಗೆ ಹಾರುವ ಈ ಹಾವಿಗೆ ಹಾರುವ ಹಾವು, ತುಳುವಿನಲ್ಲಿ ಪಲ್ಲಿಪುತ್ರ ಎಂದು ಕರೆಯುತ್ತಾರೆ.

ಮಲ್ಪೆಯ ಹೊಟೇಲಿಗೆ ತರಲಾಗಿದ್ದ ತರಕಾರಿಯ ಬುಟ್ಟಿಯಲ್ಲಿದ್ದ ಕೆಂಪು - ಹಳದಿ ಬಣ್ಣದ ಈ ಹಾವು ವಿಷಕಾರಿಯಾಗಿದ್ದಿರಬಹುದು ಎಂದು ಕೊಲ್ಲುವಂತೆ ಕೆಲವರು ಸಲಹೆ ಮಾಡಿದ್ದರೂ, ಹೊಟೇಲ್ ಮಾಲೀಕರು ಸ್ಥಳೀಯ ಹಾವು ಹಿಡಿಯುವ ಬಾಬು ಕೊಳ ಅವರಿಗೆ ತಿಳಿಸಿದ್ದಾರೆ. ಅವರು ಹಾವನ್ನು ಹಿಡಿದು ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಹಸ್ತಾಂತರಿಸಿದರು. ಇದು ವಿಷರಹಿತ ಹಾವು ಎಂದಿರುವ ಗುರುರಾಜ್ ಸನಿಲ್ ಅವರು, ಅದನ್ನು ಉಡುಪಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಸಾಮಾನ್ಯವಾಗಿ ಮರದ ಮೇಲೆ ವಾಸಿಸುವ ಈ ಹಾವು, ಮರದಿಂದ ಕೆಳಮುಖವಾಗಿ ನೆಗೆಯುತ್ತದೆ. ಬೇಟೆ ಹಿಡಿಯಲು, ಶತ್ರುಗಳ ರಕ್ಷಣೆ ಪಡೆಯಲು ತನ್ನ ಶರೀರವನ್ನು ಬಾಣದಂತೆ ಹುರಿಗೊಳಿಸಿ, ಪಕ್ಕೆಗಳನ್ನು ಅಗಲಿಸಿ, ಜಿಗಿಯುವ ಇದರ ಕಲೆಗಾರಿಕೆ ಪ್ರಕೃತಿಯ ವಿಸ್ಮಯ ಎನ್ನುತ್ತಾರೆ ಉರಗ ತಜ್ಞ ಗುರುರಾಜ್ ಸನಿಲ್.

ಈ ಹಾವು ಗರಿಷ್ಠ ಒಂದುವರೆ ಮೀ.ನಷ್ಟು ಉದ್ದ ಬೆಳೆಯುತ್ತದೆ. ಇದರಲ್ಲಿ ಹೆಣ್ಣು ಹಾವು ದೊಡ್ಡದಾಗಿರುತ್ತದೆ. ಕೆಂಪು, ಹಳದಿ, ಕಪ್ಪು, ತಿಳಿ ಹಸಿರು ಸೇರಿದಂತೆ ಇದರ ಮೈಮಾಟ ವೈವಿಧ್ಯಮ ಬಣ್ಣಗಳಿಂದ ಕೂಡಿದೆ ಎಂದವರು ತಿಳಿಸಿದ್ದಾರೆ. 

ಕರಾವಳಿಯಲ್ಲಿ ಈ ಹಾವು ಕಂಡು ಬರುವುದಿಲ್ಲ. ಉಡುಪಿಗೆ ಘಟ್ಟದ ಮೇಲಿನಿಂದ ತರಕಾರಿ ಆಮದಾಗುವುದರಿಂದ, ಆಕಸ್ಮಿಕವಾಗಿ ತರಕಾರಿ ಬುಟ್ಟಿಯಲ್ಲಿ ಸೇರಿಕೊಂಡು, ಈ ಹಾವು ಇಲ್ಲಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. 

ಕರ್ನಾಟಕ, ಗೋವಾ, ತಮಿಳುನಾಡು, ಝಾರ್ಖಾಂಡ್, ಬಿಹಾರ ಒರಿಸ್ಸಾ ಇತ್ಯಾದಿ ಘಟ್ಟಗಳಿರುವ ರಾಜ್ಯಗಳಲ್ಲಿ ಈ ಹಾವು ಪತ್ತೆಯಾಗಿದೆ. 1ರಿಂದ 1.50 ಮೀಟರ್ ವರೆಗೂ ಇವು ಬೆಳೆಯುತ್ತವೆ. ಗಂಡು ಹಾವಿಗಿಂದ ಹೆಣ್ಣು ಹಾವು ಉದ್ದ ಇರುತ್ತದೆ. ಓತಿಕ್ಯಾತ, ಸಣ್ಣ ಹಕ್ಕಿ - ಸಸ್ತನಿಗಳನ್ನು ತಿನ್ನುತ್ತದೆ. ಮಾರ್ಚ್ - ಏಪ್ರಿಲ್ ನಲ್ಲಿ ಮಿಲನಗೊಂಡು ಜೂನ್ - ಜುಲೈನಲ್ಲಿ ಮರದ ಪೊಟರೆಗಳಲ್ಲಿ ಮೊಟ್ಟೆ ಇಡುತ್ತದೆ. 2 ತಿಂಗಳ ನಂತರ ಮರಿಗಳು ಹೊರಗೆ ಬರುತ್ತವೆ. 

 - ಗುರುರಾಜ್ ಸನಿಲ್, ಉರಗತಜ್ಞ