11000 ಕೋಟಿ ನಿಮೋ ಹಗರಣ ಸ್ಫೋಟಿಸಿದ್ದ ಬೆಂಗಳೂರಿಗ

First Published 17, Feb 2018, 7:16 AM IST
Hariprasad Complaint Against Nirav Modi in 2015
Highlights

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಬಗ್ಗೆ ಬೆಂಗಳೂರಿನ ಉದ್ಯಮಿಯೊಬ್ಬರು 2015ರಲ್ಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ತನಿಖಾ ಸಂಸ್ಥೆಗಳಿಗೆ ದೂರು ನೀಡಿದ್ದರೂ, ಅವು ಮೌನಕ್ಕೆ ಶರಣಾಗಿದ್ದವು. ಈ ಮೂಲಕ ಹಗರಣ ಮುಂದುವರೆಯಲು ಪರೋಕ್ಷವಾಗಿ ನೆರವಾಗಿದ್ದವು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಬಗ್ಗೆ ಬೆಂಗಳೂರಿನ ಉದ್ಯಮಿಯೊಬ್ಬರು 2015ರಲ್ಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ತನಿಖಾ ಸಂಸ್ಥೆಗಳಿಗೆ ದೂರು ನೀಡಿದ್ದರೂ, ಅವು ಮೌನಕ್ಕೆ ಶರಣಾಗಿದ್ದವು. ಈ ಮೂಲಕ ಹಗರಣ ಮುಂದುವರೆಯಲು ಪರೋಕ್ಷವಾಗಿ ನೆರವಾಗಿದ್ದವು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನೀರವ್‌ ಮತ್ತು ಮೆಹುಲ್‌, ಪಿಎನ್‌ಬಿಗೆ ಮಾತ್ರವಲ್ಲದೇ ತಮಗೂ ಸೇರಿದಂತೆ ದೇಶದ ಹಲವು ನಗರಗಳ ನೂರಾರು ಉದ್ಯಮಿಗಳಿಗೆ ಆಭರಣದ ಉದ್ಯಮದಲ್ಲಿ ಭಾರೀ ಲಾಭದ ಆಸೆ ತೋರಿಸಿ ವಂಚನೆ ಮಾಡಿದ್ದರು ಎಂಬ ಅಂಶವನ್ನೂ ಬೆಂಗಳೂರಿನ ಉದ್ಯಮಿ ಹರಿಪ್ರಸಾದ್‌ ಬಹಿರಂಗಪಡಿಸಿದ್ದಾರೆ. ಜೊತೆಗೆ ಕೇವಲ 20-30 ಕೋಟಿ ರು. ಆಸ್ತಿ ಹೊಂದಿರುವ ನೀರವ್‌- ಮೆಹುಲ್‌ರ ಕಂಪನಿಗಳಿಗೆ ಬ್ಯಾಂಕ್‌ಗಳು 9872 ಕೋಟಿ ರು. ಸಾಲ ನೀಡಿದ್ದರ ಔದಾರ್ಯದ ಬಗ್ಗೆ ತಾವು ರಾಜ್ಯ, ರಾಷ್ಟ್ರಮಟ್ಟದ ಹಲವು ತನಿಖಾ ಸಂಸ್ಥೆಗಳಿಗೆ ದೂರು ನೀಡಿದ್ದರೂ, ಅವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಹರಿಪ್ರಸಾದ್‌ ಹೇಳಿದ್ದಾರೆ.

ಹರಿಪ್ರಸಾದ್‌ ಹೇಳಿದ್ದೇನು?:

‘2011-12ರಲ್ಲಿ ಮೆಹುಲ್‌ ಚೋಕ್ಸಿ ಪ್ರವರ್ತಕರಾಗಿರುವ ಗೀತಾಂಜಲಿ ಜೆಮ್ಸ್‌ ಕಂಪನಿ ಫ್ರಾಂಚೈಸಿ ಹೂಡಿಕೆದಾರರ ಆಹ್ವಾನಿಸಿ ಜಾಹೀರಾತು ನೀಡಿತ್ತು. ಅದರಂತೆ 10 ಕೋಟಿ ರು. ಹೂಡಿಕೆ ಮಾಡಿ ತಮ್ಮ ಕಂಪನಿಯ ಮಳಿಗೆ ತೆಗೆದರೆ ಮಾಸಿಕ 15 ಲಕ್ಷ ರು.ವರೆಗೆ ಆದಾಯ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ನಾನು 10 ಕೋಟಿ ರು. ಹೂಡಿಕೆ ಮಾಡಿ ಗೀತಾಂಜಲಿ ಜೆಮ್ಸ್‌ನ ಮಳಿಗೆ ತೆರೆದಿದ್ದೆ. ಆದರೆ ಒಂದೇ ಒಂದು ತಿಂಗಳು ಕೂಡಾ ಕಂಪನಿ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಹಳೆಯ ಮಾಲುಗಳನ್ನು ದುಬಾರಿ ಬೆಲೆಗೆ ತಂದು ಅಂಗಡಿಗೆ ಸುರಿದರು. ಈ ಬಗ್ಗೆ ಪ್ರಶ್ನಿಸಿದರೆ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಒಂದೂವರೆ ವರ್ಷ ಅವರ ಹಿಂದೆ ಸುತ್ತಾಡಿ ಕೊನೆಗೆ 2013-14ರಲ್ಲಿ ನಾನು ಅಂಗಡಿಯನ್ನು ಮುಚ್ಚಿದೆ.’

‘ನಂತರ ಕಂಪನಿಯ ಹಿನ್ನೆಲೆಯನ್ನು ಪತ್ತೆ ಮಾಡಿದಾಗ, ಗೀತಾಂಜಲಿ ಗ್ರೂಪ್‌ ಆಫ್‌ ಕಂಪನೀಸ್‌ ಸಾವಿರಾರು ಕೋಟಿ ರು. ಹಣವನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿರುವುದು ಕಂಡುಬಂದಿತ್ತು. ಅದರ ಬ್ಯಾಲೆನ್ಸ್‌ ಶೀಟ್‌ನಲ್ಲಿ ಆಘಾತಕಾರಿ ಅಂಶಗಳಿದ್ದವು. 30-40 ಕೋಟಿ ರು. ಮೌಲ್ಯ ಹೊಂದಿರುವ ಕಂಪನಿಗಳಿಗೆ 31 ಬ್ಯಾಂಕ್‌ಗಳು 9872 ಕೋಟಿ ರು.ನಷ್ಟುಭಾರೀ ಸಾಲ ನೀಡಿದ್ದವು. ಇದು ಸಾಕಷ್ಟುಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರಿಗೆ ದೂರು ಸಲ್ಲಿಸಿದೆ, ಬಳಿಕ ು ಕೋರ್ಟ್‌ನಲ್ಲಿ ಕೇಸು ದಾಖಲಿಸಿದೆ. ಆದರೆ ತಾಂತ್ರಿಕ ಸೇರಿದಂತೆ ಹಲವು ಕಾರಣಗಳಿಂದಾಗಿ ಕೇಸು ಇನ್ನೂ ಕೋರ್ಟ್‌ನಲ್ಲಿ ಕೊಳೆಯುತ್ತಿದೆ.’

ಸಿಐಡಿಗೆ ದೂರು: ‘ಗೋಲ್‌ಮಾಲ್‌ ಕುರಿತು ತನಿಖೆ ನಡೆಸುವಂತೆ 2015ರಲ್ಲಿ ಸಿಐಡಿಗೆ ದೂರು ಸಲ್ಲಿಸಿದೆ. ಸ್ವಲ್ಪ ಕಾಲ ಅವರು ಈ ಬಗ್ಗೆ ಗಮನ ಹರಿಸಿದರಾದರೂ, ನಂತರ ಕೈಕಟ್ಟಿಕುಳಿತುಕೊಂಡರು. ಹೀಗಾಗಿ 2016ರಲ್ಲಿ ಇಡಿ, ಸಿಬಿಐ, ಸೆಬಿಗೆ ಪತ್ರ ಬರೆದೆ. ಅವರಾರ‍ಯರೂ ಈ ಬಗ್ಗೆ ಗಮನ ಹರಿಸಲಿಲ್ಲ. ಬೇರೆ ದಾರಿ ಕಾಣದೆ ಅಂತಿಮವಾಗಿ ಪ್ರಧಾನಿ ಕಚೇರಿಗೆ ಪತ್ರ ಬರೆದೆ. ನನ್ನ ಪತ್ರದ ಬಗ್ಗೆ ಗಮನ ಹರಿಸುವಂತೆ ಪ್ರಧಾನಿ ಕಾರ್ಯಾಲಯ, ಕಂಪನಿ ರಿಜಿಸ್ಟ್ರಾರ್‌ಗೆ ಸೂಚಿಸಿತು.’

‘ಆದರೆ ಅಲ್ಲಿಂದ ಇಲ್ಲಿಯವರೆಗೆ ಕಂಪನಿ ರಿಜಿಸ್ಟ್ರಾರ್‌ ಕಚೇರಿಯಿಂದ ನನ್ನೆಡೆಗೆ ಯಾವುದೇ ಮಾತುಕತೆ ನಡೆದಿಲ್ಲ. ಕೊನೆಗೊಂದು ದಿನ ನಿಮ್ಮ ದೂರನ್ನು ಇತ್ಯರ್ಥಪಡಿಸಲಾಗಿದೆ ಎಂದು ಕಂಪನಿ ರಿಜಿಸ್ಟ್ರಾರ್‌ ಕಚೇರಿ ಇ ಮೇಲ್‌ನಲ್ಲಿ ಮಾಹಿತಿ ನೀಡಿತು. ಆದರೆ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಗ್ಗೆ ಅವರನ್ನು ಸಂಪರ್ಕಿಸುವ ಯತ್ನ ಮಾಡಿದೆನಾದರೂ ಅದು ಫಲ ಕೊಡಲಿಲ್ಲ. ಹೀಗಾಗಿ ಬಹುಶಃ ನಮ್ಮ ವ್ಯವಸ್ಥೆ ಇರುವುದೇ ಹೀಗೆ ಎಂದು ಬೇಸರಗೊಂಡು ಸುಮ್ಮನಾದೆ’ ಎಂದು ಹರಿಪ್ರಸಾದ್‌ ಹೇಳಿದ್ದಾರೆ.

loader