ಅಲಹಾಬಾದ್(ಜು.7): ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುಜರಾತ್ ಪಟಿದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಮತ್ತು ಶಾಸಕರಾದ ಅಲ್ಪೇಶ್ ಠಾಕೂರ್ ಹಾಗೂ ಜಿಗ್ನೇಶ್ ಮೇವಾನಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯೆ ಮಾರಾಟ ಜಾಲ ಬಹಿರಂಗಪಡಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಠಾಕೂರ್, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಹಾರ್ದಿಕ್ ಪಟೇಲ್ ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಕಾಂಚನ ಬೆನ್ ಮಕ್ವಾನ ಅವರ ಮನೆ ಮೇಲೆ ದಾಳಿ ಮಾಡಿದ್ದರು.

ಈ ಸಂಬಂಧ ಕಾಂಚನ ಬೆನ್ ಈ ಮೂವರ ನಾಯಕರ ವಿರುದ್ಧ ಗಾಂಧಿನಗರದ ಸೆಕ್ಟರ್ 21 ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಾರ್ದಿಕ್ ಪಟೇಲ್, ಜಿಗ್ಗೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಮೂವರೂ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಮ್ಮ ಬೆಂಬಲಿಗರೊಂದಿಗೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಕಾಂಚನ ಬೆನ್ ದೂರು ನೀಡಿದ್ದರು.

ಇಷ್ಟೇ ಅಲ್ಲದೇ ಮನೆಯಲ್ಲಿ ಎರಡು ಪ್ಯಾಕೇಟ್ ದೇಶಿ ಮದ್ಯಗಳನ್ನು ತಂದಿಟ್ಟು, ಅಕ್ರಮ ಮದ್ಯೆ ಸಂಗ್ರಹಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದರು. ಇನ್ನು ಕಾಂಚನ ಬೆನ್ ದೂರನ್ನು ಸ್ವೀಕರಿಸಿರುವ ಪೊಲೀಸರು, ಹಾದಿರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಹಾಗೂ ಜಿಗ್ನೇಶ್ ಮೇವಾನಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.