ಮುಂಬೈನಿಂದ ಹಜ್ ಯಾತ್ರಿಕರನ್ನು ಕರೆದೊಯ್ಯಲು ಈ ಹಿಂದೆ ಹಡಗು ಸೇವೆ ಇತ್ತು. ಎಂ.ವಿ. ಅಕ್ಬರಿ ಎಂಬ ಈ ಹಡಗು ಹಳತಾದ ಹಿನ್ನೆಲೆಯಲ್ಲಿ 1995ರಲ್ಲಿ ಸಮುದ್ರ ಮಾರ್ಗದ ಹಜ್ ಯಾತ್ರೆ ಸ್ಥಗಿತಗೊಂಡಿತ್ತು.
ನವದೆಹಲಿ(ಏ.05): ಹಜ್ ಯಾತ್ರೆ ಕೈಗೊಳ್ಳುವ ಮುಸ್ಲಿಮರ ಅನುಕೂಲಕ್ಕಾಗಿ 23 ವರ್ಷಗಳಿಂದ ಸ್ಥಗಿತಗೊಂಡಿರುವ ಹಡಗು ಸೇವೆಯನ್ನು ಕೇಂದ್ರ ಸರ್ಕಾರ ಮುಂದಿನ ವರ್ಷದಿಂದಲೇ ಪುನಾರಂಭಿಸುವ ಸಾಧ್ಯತೆ ಇದೆ.
2018ರ ಹಜ್ ನೀತಿ ರೂಪಿಸಲು ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಸಮಿತಿ, ಸೌದಿ ಅರೇಬಿಯಾದ ಜೆದ್ದಾಗೆ ಸಮುದ್ರ ಮಾರ್ಗವಾಗಿ ಹಜ್ ಯಾತ್ರಿಕರನ್ನು ಕಳುಹಿಸುವ ವ್ಯವಸ್ಥೆ ಮರು ಆರಂಭಿಸುವ ಕುರಿತು ಚರ್ಚೆ ನಡೆಸಿದೆ.
ಮುಂಬೈನಿಂದ ಹಜ್ ಯಾತ್ರಿಕರನ್ನು ಕರೆದೊಯ್ಯಲು ಈ ಹಿಂದೆ ಹಡಗು ಸೇವೆ ಇತ್ತು. ಎಂ.ವಿ. ಅಕ್ಬರಿ ಎಂಬ ಈ ಹಡಗು ಹಳತಾದ ಹಿನ್ನೆಲೆಯಲ್ಲಿ 1995ರಲ್ಲಿ ಸಮುದ್ರ ಮಾರ್ಗದ ಹಜ್ ಯಾತ್ರೆ ಸ್ಥಗಿತಗೊಂಡಿತ್ತು. ಹೀಗಾಗಿ ಹಜ್ ಯಾತ್ರಿಕರು ಸರ್ಕಾರದ ಸಬ್ಸಿಡಿಯಲ್ಲಿ ವಿಮಾನದ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ 2022ರೊಳಗೆ ಹಜ್ ಸಬ್ಸಿಡಿಯನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ 2012ರಲ್ಲಿ ತೀರ್ಪು ನೀಡಿದೆ. ಹೀಗಾಗಿ ಸರ್ಕಾರ ಹಡಗಿನ ಮೊರೆ ಹೋಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ವಿಮಾನಗಳಿಗೆ ಹೋಲಿಸಿದರೆ ಹಡಗು ಮೂಲಕ ಹಜ್ ಯಾತ್ರೆ ಕೈಗೊಂಡರೆ ಪ್ರಯಾಣ ವೆಚ್ಚ ಅರ್ಧದಷ್ಟು ತಗ್ಗಲಿದೆ. ಜತೆಗೆ ಒಮ್ಮೆಲೆ 4ರಿಂದ 5 ಸಾವಿರ ಮಂದಿಯನ್ನು ಒಯ್ಯಬಹುದು. ಆಧುನಿಕ ಕಾಲದ ಹಡಗುಗಳು ಸುಸಜ್ಜಿತ ಸೌಲಭ್ಯ ಹೊಂದಿದ್ದು, ಕೇವಲ ಎರಡು- ಮೂರು ದಿನದಲ್ಲಿ ಭಾರತದಿಂದ ಜೆದ್ದಾಗೆ ಸಂಪರ್ಕ ಕಲ್ಪಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮುಂಬೈ, ಕೋಲ್ಕತಾ ಹಾಗೂ ಕೊಚ್ಚಿ ಬಂದರುಗಳಿಂದ ಯಾತ್ರೆ ಆರಂಭಿಸುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ. 1995ರಲ್ಲಿದ್ದ ಹಡಗು ಮುಂಬೈನಿಂದ ಜೆದ್ದಾಗೆ ತಲುಪಲು ಒಂದು ವಾರ ಸಮಯ ತೆಗೆದುಕೊಳ್ಳುತ್ತಿತ್ತು.
ಹಜ್ ಯಾತ್ರೆಗೆ ಪರ್ಯಾಯ ಮಾರ್ಗದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಾರಾಂಭದಲ್ಲಿ ಮುಂಬೈನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
