ಮಂಡ್ಯ(ಸೆ.8): ರೈತರ ಜಮೀನಿಗೆ 2 ದಿನ ಕಾಟಾಚಾರಕ್ಕೆ ನೀರು ಬಿಟ್ಟು ನಿಲ್ಲಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಕಾವೇರಿ ನೀರಿನ ಅನ್ಯಾಯದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು, 8 ವರ್ಷದಿಂದ ಅಧಿಕಾರ ನಡೆಸಿದವರು ಏನೇನು ಡ್ಯಾಮೇಜ್ ಮಾಡಿದ್ದಾರೆ ಅನ್ನುವುದು ಬಹಿರಂಗ ಸತ್ಯ. ರೈತರು ಯಾರಿಗೂ ನಷ್ಟ ಉಂಟು ಮಾಡದೆ ಹೋರಾಟ ಮಾಡಲಿ. ನಷ್ಟ ಉಂಟಾದರೆ ಅದರ ಪರಿಣಾಮ ನಮ್ಮವರೆ ಎದುರಿಸಬೇಕಾಗುತ್ತದೆ. ನಿಮ್ಮ ಜೊತೆ ನಾನು ಇರುತ್ತೇನೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಹಿಂಸಾಚಾರ ನಿರತ ಪ್ರತಿಭಟನಾಕಾರರಿಗೆ ಕರೆ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಕ್ಕಾಗಿರುವ ಅನ್ಯಾಯವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಾಸ್ತವಾಂಶವನ್ನು ಬಿಚ್ಚಿಡಲಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ.ತಮಿಳುನಾಡು ಸರ್ಕಾರ ಪ್ರಭಾವ ಬೀರಿರುವ ಕಾರಣ ನಾವು ಕಾನೂನು ವ್ಯಾಪ್ತಿಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.
