ನನ್ನ ಕೆಲಸ ಸಹಿಸದೇ ಪೊಳ್ಳು ಆರೋಪ : ಇದಕ್ಕೆಲ್ಲಾ ಧೃತಿಗೆಡುವುದಿಲ್ಲ

First Published 24, Feb 2018, 11:26 AM IST
H Anjaneya Slams BJP Allegation
Highlights

ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ಕೊರೆಸುವ ಕಾಮಗಾರಿ ವೇಳೆ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಗಳಲ್ಲಿ ಹುರುಳಿಲ್ಲ. ಬಡವರ ಪರ ಕೆಲಸ ಮಾಡುತ್ತಿರುವುದನ್ನು ಸಹಿಸದೇ ಈ ರೀತಿ ಪೊಳ್ಳು ಆರೋಪ ಮಾಡಲಾಗುತ್ತಿದೆ.

ಬೆಂಗಳೂರು: ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ಕೊರೆಸುವ ಕಾಮಗಾರಿ ವೇಳೆ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಗಳಲ್ಲಿ ಹುರುಳಿಲ್ಲ. ಬಡವರ ಪರ ಕೆಲಸ ಮಾಡುತ್ತಿರುವುದನ್ನು ಸಹಿಸದೇ ಈ ರೀತಿ ಪೊಳ್ಳು ಆರೋಪ ಮಾಡಲಾಗುತ್ತಿದೆ.

ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಆರೋಪ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬಡ ರೈತನ ಉದ್ಧಾರಕ್ಕೆ ಮುಂದಾಗಿರುವುದನ್ನು ಸಹಿಸದೇ ಶೋಭಾ ಅವರು ಸತ್ಯಕ್ಕೆ ದೂರವಾದ ಆಪಾದನೆ ಮಾಡುತ್ತಿದ್ದಾರೆ.

ಇದರಿಂದ ನಾನು ಧೃತಿಗೆಡಲ್ಲ. ಬಡವರ ಪರವಾದ ನನ್ನ ನಿಲುವು ಬದಲಾಗದು ಎಂದಿದ್ದಾರೆ. ಹೊಳಲ್ಕೆರೆಯು ಮೀಸಲು ಕ್ಷೇತ್ರ. ಇಲ್ಲಿ ಕಡುಬಡವರ ಸಂಖ್ಯೆ ಹೆಚ್ಚಿದೆ. ಸಣ್ಣ, ಅತಿಸಣ್ಣ ಹಿಡುವಳಿದಾರ ರೈತರು ಖುಷ್ಕಿ ಜಮೀನು ಹೊಂದಿದ್ದು, ಖುಷ್ಕಿ ಜಮೀನಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಗಂಗಾಕಲ್ಯಾಣ ಯೋಜನೆಯಡಿ ಅವರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ತರವಾದ ಯೋಜನೆ ಇದಾಗಿದೆ. ಈ ಯೋಜನೆಯ ಅನ್ವಯ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಳವೆ ಬಾವಿ ಕೊರೆಸಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಫಲಾನುಭವಿಗಳ ಕೊಳವೆ ಬಾವಿ ಕೊರೆಸಲಾಗಿದೆ. ಈ ಅವಧಿಯಲ್ಲಿ ಮಂಜೂರಾದ ಎಲ್ಲ ಕೊಳವೆ ಬಾವಿಗಳನ್ನು ನಿಯಮಾನುಸಾರ ಕೊರೆಯಲಾಗುತ್ತಿದೆ. ಕೊಳವೆ ಬಾವಿ ಕೊರೆಸಿರುವುದನ್ನು ದೃಢಪಪಡಿಸಿ ಕೊಂಡು ಅಧಿಕಾರಿಗಳು ಹಣ ಪಾವತಿ ಮಾಡುತ್ತಿದ್ದಾರೆ.

ಎಲ್ಲೂ ಕೂಡ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ. ಇಂತಹ ಆರೋಪಗಳಿಂದ ನಾನು ನನ್ನ ಸಂಕಲ್ಪದಿಂದ ದೂರವಾಗು ವುದಿಲ್ಲ. ಸ್ವತಃ ಬಡವರ ಮನೆಯ ಮಗನಾದ ನಾನು ಶೋಷಿತರ ಅಭ್ಯುದಯಕ್ಕೆ ಬೇಕಾದ ಗಂಗಾ ಕಲ್ಯಾಣದಂತಹ ಯೋಜನೆಯನ್ನು ಯಶಸ್ವಿ ಯಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶೋಭಾ ಅವರು ಸ್ವತಃ ಸಚಿವರಾಗಿದ್ದವರು. ಇಂತಹವರು ಇತರರ ಬಗ್ಗೆ ಆರೋಪ ಮಾಡುವಾಗ ಪೂರ್ವಾಪರ ನೋಡಿ ಆಧಾರವಿಟ್ಟುಕೊಂಡು ಮಾತನಾಡಬೇಕು ಎಂದರು.

loader