ನಲಪಾಡ್ ಬಗ್ಗೆ ರಾಘಣ್ಣ ಮಗ ಗುರು ರಾಜ್’ ಕುಮಾರ್ ಬಿಚ್ಚಿಟ್ಟ ವಿಚಾರವೇನು..?

news | Thursday, February 22nd, 2018
Suvarna Web Desk
Highlights

ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ನಡೆಸಿದ ಹಲ್ಲೆ ಪ್ರಕರಣದ ಕುರಿತು ವರನಟ ಡಾ.ರಾಜಕುಮಾರ್‌ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜಕುಮಾರ್‌ ಮಗ ಗುರು ರಾಜಕುಮಾರ್‌ ಅವರ ಮಾತಿದು.

ಗಿರೀಶ್‌ ಮಾದೇನಹಳ್ಳಿ ಬೆಂಗಳೂರು

ಬೆಂಗಳೂರು : ‘ಆಸ್ಪತ್ರೆಯಲ್ಲಿ ನಾನು ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದೆ ಅವರೆಲ್ಲ ಗಲಾಟೆ ಮಾಡುತ್ತಿದ್ದರು. ನನ್ನ ಮೇಲೂ ಹಲ್ಲೆ ನಡೆಸಲು ಮುಂದಾದರು. ಆದರೆ ಅಷ್ಟರಲ್ಲಿ ಅವರ ಪೈಕಿ ಯಾರೋ ಒಬ್ಬರು, ಏಯ್‌ ಅವರನ್ನು ಮುಟ್ಟಬೇಡ. ರಾಜಕುಮಾರ್‌ ಫ್ಯಾಮಿಲಿ ಅಂತ ಜೋರಾಗಿ ಅಂದ್ರು. ಇದಾದ ನಂತರವೇ ಅವರೆಲ್ಲ ತಣ್ಣಗಾಗಿದ್ದು!’

ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ನಡೆಸಿದ ಹಲ್ಲೆ ಪ್ರಕರಣದ ಕುರಿತು ವರನಟ ಡಾ.ರಾಜಕುಮಾರ್‌ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜಕುಮಾರ್‌ ಮಗ ಗುರು ರಾಜಕುಮಾರ್‌ ಅವರ ಮಾತಿದು. ಗುರು ಮತ್ತು ಹಲ್ಲೆಗೊಳಗಾದ ವಿದ್ವತ್‌ ಆಪ್ತ ಸ್ನೇಹಿತರು.

‘ನಾನು ಮತ್ತು ವಿದ್ವತ್‌ ಬಾಲ್ಯ ಸ್ನೇಹಿತರು. ವಿದ್ವತ್‌ಗೆ ಮೊಹಮ್ಮದ್‌ ನಲಪಾಡ್‌ನ ಮುಖ ಪರಿಚಯವೂ ಇಲ್ಲ. ವಿದ್ವತ್‌ ಮತ್ತು ಮೊಹಮ್ಮದ್‌ ಸ್ನೇಹಿತರು ಹಾಗೂ ಅವರ ನಡುವೆ ವ್ಯಾವಹಾರಿಕ ಸಂಬಂಧವಿತ್ತು ಎಂಬ ಮಾತುಗಳು ಬೇಸರ ತಂದಿವೆ. ವಾಸ್ತವವಾಗಿ ಶನಿವಾರ ರಾತ್ರಿ ಹಲ್ಲೆ ನಡೆಸಿದ್ದು ಎಂಎಲ್‌ಎ ಹ್ಯಾರಿಸ್‌ ಪುತ್ರ ಎಂದು ಹೇಳಿದಾಗಲೇ ಮೊಹಮ್ಮದ್‌ ನಲಪಾಡ್‌ ಯಾರು ಎಂಬುದು ಗೊತ್ತಾಯಿತು’ ಎಂದೂ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಮಲ್ಯ ಆಸ್ಪತ್ರೆಯ ಎರಡನೇ ಮಹಡಿಯ ತುರ್ತು ಚಿಕಿತ್ಸಾ ಘಟಕದಲ್ಲಿ ಗೆಳೆಯನ ಆರೈಕೆಯಲ್ಲಿ ತೊಡಗಿರುವ ಗುರುರಾಜ್‌ ಬುಧವಾರ ‘ಕನ್ನಡಪ್ರಭ’ ಜತೆ ಕೆಲಕಾಲ ಮಾತನಾಡಿದರು. ಆಪ್ತ ಗೆಳೆಯನಿಗೆ ಬಂದೊದಗಿದ ಪರಿಸ್ಥಿತಿ ಗುರು ಅವರನ್ನು ತೀವ್ರ ಬಾಧಿಸಿದೆ. ಮನದಲ್ಲಿ ಮಡುಗಟ್ಟಿರುವ ನೋವನ್ನು ಬಲವಂತವಾಗಿ ಅದುಮಿಡುತ್ತಲೇ ಘಟನೆಯ ವಿವರಗಳನ್ನು ಅವರು ಬಿಡಿಸಿಟ್ಟರು.

ಶಾಸಕ ಹ್ಯಾರಿಸ್‌ ಪುತ್ರ ನಲಪಾಡ್‌ ಸೇರಿದಂತೆ ಪ್ರತಿಷ್ಠಿತ ರಾಜಕಾರಣಿಗಳ ಪುತ್ರರೆಲ್ಲ ವಿದ್ವತ್‌ಗೆ ಸ್ನೇಹಿತರು, ಶನಿವಾರ ರಾತ್ರಿ ಅವರೆಲ್ಲ ಪಾರ್ಟಿ ಮಾಡುತ್ತಿದ್ದರು, ನಲಪಾಡ್‌ ಜತೆ ವಿದ್ವತ್‌ಗೆ ಬಿಟ್‌ ಕಾಯಿನ್‌ ವ್ಯವಹಾರವಿತ್ತು ಎಂಬ ಆರೋಪಗಳನ್ನೆಲ್ಲ ಬಲವಾಗಿ ಅಲ್ಲಗಳೆದ ಗುರು, ನನ್ನ ಗೆಳೆಯ ವಿದ್ವತ್‌ ಚೇತರಿಸಿಕೊಂಡ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಪ್ರತಿಕ್ರಿಯಿಸಿದರು.

ನಾನು ಹಾಗೂ ವಿದ್ವತ್‌ ಮೂರನೇ ತರಗತಿಯಿಂದ ಸ್ನೇಹಿತರು. ಹಾಗಾಗಿ ಆತನ ಬಹುತೇಕ ಗೆಳೆಯರ ಪರಿಚಯ ನನಗೆ ಇದೆ. ವಿದ್ವತ್‌ ಯಾರೊಂದಿಗೂ ಜಗಳ ಮಾಡಿಕೊಂಡವನಲ್ಲ. ಬಹುಶಃ ಆತನಿಗೆ ಬಿಟ್‌ ಕಾಯಿನ್‌ ಅಂದರೇನು ಎಂಬುದೇ ಗೊತ್ತಿಲ್ಲ. ಇನ್ನು ಮೊಹಮ್ಮದ್‌ ನಲಪಾಡ್‌ ಹೆಸರನ್ನು ಆತ ಯಾವತ್ತೂ ಕೇಳಿದವನಲ್ಲ. ಶನಿವಾರವೇ ಆತನ ಬಗ್ಗೆ ಗೊತ್ತಾಗಿದ್ದು ಎಂದು ಸ್ಪಷ್ಟಪಡಿಸಿದರು.

ಡಾ.ರಾಜ್‌ಗೂ ಲೋಕನಾಥ್‌ ಪರಿಚಿತ:

ಅಂಕಲ್‌ (ವಿದ್ವತ್‌ ತಂದೆ ಲೋಕನಾಥ್‌) ಕೂಡ ನಮ್ಮ ಕುಟುಂಬದ ಸ್ನೇಹಿತರು. ನಮ್ಮಪ್ಪನಿಗೆ ಮಾತ್ರವಲ್ಲ, ತಾತ ಡಾ.ರಾಜಕುಮಾರ್‌ ಅವರಿಗೂ ಅಂಕಲ್‌ ಪರಿಚಯಸ್ಥರು. ಎರಡು ಕುಟುಂಬಗಳ ನಡುವೆ ಮನೆಗೆ ಬಂದು ಹೋಗುವಷ್ಟುಆತ್ಮೀಯತೆ ಇದೆ. ಚಿಕ್ಕಪ್ಪ (ಅಪ್ಪು), ದೊಡ್ಡಪ್ಪ (ಶಿವರಾಜಕುಮಾರ್‌) ಅವರಿಗೂ ಅಂಕಲ್‌ ಸ್ನೇಹಿತರು. ಅಲ್ಲದೆ ಅಂಕಲ್‌ಗೆ ಪೊಲೀಸ್‌ ಇಲಾಖೆಯವರು ಹಾಗೂ ರಾಜಕಾರಣಿಗಳು ಪರಿಚಯಸ್ಥರು. ಅದರಂತೆ ಹ್ಯಾರಿಸ್‌ ಸಹ ಅಂಕಲ್‌ಗೆ ಗೆಳೆಯರಿರಬಹುದು. ಆದರೆ ನಲಪಾಡ್‌ ಜತೆ ವಿದ್ವತ್‌ಗೆ ಸ್ನೇಹವಿರಲಿಲ್ಲ ಎಂದು ಗುರು ಖಚಿತವಾಗಿ ತಿಳಿಸಿದರು.

ಆ ರಾತ್ರಿ ನಡೆದಿದ್ದೇನು ಅಂದರೆ...:

ಶನಿವಾರ ರಾತ್ರಿ ಸುಮಾರು 10.30ಕ್ಕೆ ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ಗಲಾಟೆಯಾಗಿದೆ. ನನಗೆ ವಿದ್ವತ್‌ ಜೊತೆಯಲ್ಲಿದ್ದ ಮತ್ತೊಬ್ಬ ಕರೆ ಮಾಡಿ ಹಲ್ಲೆಯಾಗಿರುವ ವಿಷಯ ತಿಳಿಸಿದ. ಅಲ್ಲದೆ, ಆತನನ್ನು ಮಲ್ಯ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿದ. ತಕ್ಷಣವೇ ಸ್ನೇಹಿತ ಆನಂದ್‌ ಜತೆ ನಾನು ಆಸ್ಪತ್ರೆಗೆ ಹೊರಟು ಬಂದೆ. ನಾನು ಆಸ್ಪತ್ರೆಗೆ ಬಂದಾಗ ಅಲ್ಲಿ ಕೂಡ ನಲಪಾಡ್‌ ಹಾಗೂ ಆತನ 15 ಬೆಂಬಲಿಗರು ನುಗ್ಗಿ ಗಲಾಟೆ ಮಾಡುತ್ತಿದ್ದರು. ನಾನು ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದೆ ಅವರೆಲ್ಲ ಗಲಾಟೆ ಮಾಡುತ್ತಿದ್ದರು. ನನ್ನ ಮೇಲೂ ಹಲ್ಲೆಗೆ ಮುಂದಾದರು. ಆದರೆ ಅಷ್ಟರಲ್ಲಿ ಅವರ ಪೈಕಿ ಯಾರೋ ಒಬ್ಬರು, ಏಯ್‌ ಅವರನ್ನು ಮುಟ್ಟಬೇಡ. ರಾಜಕುಮಾರ್‌ ಫ್ಯಾಮಿಲಿ ಅಂತ ಜೋರಾಗಿ ಅಂದರು. ಇದಾದ ನಂತರವೇ ಅವರೆಲ್ಲ ತಣ್ಣಾದರು ಎಂದು ಗುರು ವಿವರಿಸಿದರು.

ಕೆಲ ಹೊತ್ತಿನ ಬಳಿಕ ಆಸ್ಪತ್ರೆಗೆ ಯಾರೋ ಬಂದು ಗಲಾಟೆಯಲ್ಲಿ ನಿರತರಾಗಿದ್ದ ನಲಪಾಡ್‌ನನ್ನು ಕರೆದುಕೊಂಡು ಹೋದರು. ಅಷ್ಟರಲ್ಲಿ ಅಂಕಲ್‌ (ವಿದ್ವತ್‌ ತಂದೆ) ಸಹ ಆಸ್ಪತ್ರೆಗೆ ಬಂದರು. ಟ್ರೀಟ್‌ಮೆಂಟ್‌ನಲ್ಲಿದ್ದಾಗ ನಿನ್ನ ಮೇಲೆ ಹಲ್ಲೆ ಮಾಡಿದ್ದು ನಲಪಾಡ್‌ ಎಂದು ವಿದ್ವತ್‌ಗೆ ಹೇಳಿದೆವು. ಆದರೆ ಆತನಿಗೆ ಮೊದಲು ನಲಪಾಡ್‌ ಅಂದರೆ ಯಾರೆಂಬುದೇ ಗೊತ್ತಾಗಲಿಲ್ಲ. ಆಮೇಲೆ ಎಂಎಎಲ್‌ಎ ಹ್ಯಾರಿಸ್‌ ಮಗ ಎಂದಾಗ ಗೊತ್ತಾಯಿತು ಎಂದರು.

ನಾನು ವಿನಂತಿಸಿಕೊಂಡರೂ ನಲಪಾಡ್‌ ಕ್ರೌರ್ಯ ಮೆರೆದ. ಆತನ ನಡವಳಿಕೆ ಭಯಗೊಳಿಸಿತು. ನಮಗೆ ನಲಪಾಡ್‌ ಸ್ನೇಹಿತನಲ್ಲ. ಆವತ್ತು ಪ್ರತಿಷ್ಠಿತ ರಾಜಕಾರಣಿಗಳ ಮಕ್ಕಳೆಲ್ಲ ಇದ್ದರು ಎನ್ನುತ್ತಾರೆ. ಅವೆಲ್ಲ ಸುಳ್ಳು. ಈ ಮಾತುಗಳಿಗೆ ವಿದ್ವತ್‌ನೇ ಉತ್ತರಿಸುತ್ತಾನೆ ಎಂದು ಗುರು ಹೇಳಿದರು.

ದ್ರವ ಆಹಾರ ಸೇವನೆ: ದಿನದಿಂದ ದಿನಕ್ಕೆ ವಿದ್ವತ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಮೂಗು ಮತ್ತು ದವಡೆಗೆ ಬಲವಾದ ಪೆಟ್ಟಾಗಿರುವ ಕಾರಣಕ್ಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆತನಿಗೆ ದ್ರವ ಆಹಾರ ನೀಡಲಾಗುತ್ತಿದೆ ಎಂದು ಗುರು ರಾಜಕುಮಾರ್‌ ತಿಳಿಸಿದರು.

ಇನ್ನೆರಡು ದಿನಗಳ ಚಿಕಿತ್ಸೆ ಬಳಿಕ ಎದೆಗೂಡಿನ ಮೂಳೆ ಜೋಡಣೆಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಆತ ಸಂಪೂರ್ಣವಾಗಿ ಮೊದಲಿನಂತೆ ಆಗಲು ಕೆಲ ದಿನಗಳು ಬೇಕಾಗುತ್ತವೆ ಎಂದು ಹೇಳಿದರು.

 

ಶನಿವಾರ ರಾತ್ರಿ ಫರ್ಜಿ ಕೆಫೆಯಲ್ಲಿ ಗಲಾಟೆ ಆದ ಬಗ್ಗೆ ವಿದ್ವತ್‌ ಜತೆಯಲ್ಲಿದ್ದ ಗೆಳೆಯ ನನಗೆ ಫೋನ್‌ ಮಾಡಿ ತಿಳಿಸಿದ. ನಾನು ತಕ್ಷಣವೇ ವಿದ್ವತ್‌ ಇದ್ದ ಆಸ್ಪತ್ರೆಗೆ ಧಾವಿಸಿದೆ. ಅಲ್ಲಿ ನಲಪಾಡ್‌ ಹಾಗೂ ಆತನ 15 ಬೆಂಬಲಿಗರು ಗಲಾಟೆ ನಡೆಸುತ್ತಿದ್ದರು. ನನ್ನ ಮೇಲೂ ಹಲ್ಲೆಗೆ ಮುಂದಾದರು. ಅವರಲ್ಲೊಬ್ಬ ‘ಏಯ್‌ ಅವರನ್ನು ಮುಟ್ಟಬೇಡ. ಅವರು ರಾಜ್‌ಕುಮಾರ್‌ ಫ್ಯಾಮಿಲಿ’ ಅಂದ. ನಂತರವೇ ಅವರೆಲ್ಲ ತಣ್ಣಗಾಗಿದ್ದು.

- ಗುರು ರಾಜ್‌ಕುಮಾರ್‌, ಡಾ. ರಾಜ್‌ ಮೊಮ್ಮಗ

Comments 0
Add Comment

  Related Posts

  Retired Doctor Throws Acid on Man

  video | Thursday, April 12th, 2018

  Cop investigate sunil bose and Ambi son

  video | Tuesday, April 10th, 2018

  Retired Doctor Throws Acid on Man

  video | Thursday, April 12th, 2018
  Suvarna Web Desk