ಆದರೆ ಮೂರನೆ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ಬಲವಂತ್ ಸಿಂಗ್ ರಜಪೂತ್ ಸ್ಪರ್ಧಿಸಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ
ಗಾಂಧಿನಗರ(ಆ.07): ಗುಜರಾತ್'ನಿಂದ ನಾಳೆ 3 ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್'ನ ಹಿರಿಯ ನಾಯಕ ಅಹ್ಮದ್ ಪಟೇಲ್'ಗೆ ಸೋಲುವ ಭೀತಿ ಎದುರಾಗಿದೆ.
ಸಂಖ್ಯಾ ಆಧಾರದ ಮೇಲೆ ಬಿಜೆಪಿಯಿಂದ ನಿರಾಯಸವಾಗಿ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗಬಹುದು. ಆದರೆ ಮೂರನೆ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ಬಲವಂತ್ ಸಿಂಗ್ ರಜಪೂತ್ ಸ್ಪರ್ಧಿಸಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಕಾಂಗ್ರೆಸ್'ಗೆ ಬೆಂಬಲ ನೀಡಬೇಕೆಂದಿದ್ದ ಎನ್'ಸಿಪಿಯ ಇಬ್ಬರು ಶಾಸಕರು ಕೊನೆಗಳಿಗೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ಇದು ಅಹ್ಮದ್ ಪಟೇಲ್'ಗೆ ಕೊನೆಗಳಿಗೆಯ ಶಾಕ್ ಆಗಿದೆ.
ಈ ಬಗ್ಗೆ ಸ್ವತಃ ಹಿರಿಯ ಎನ್'ಸಿಪಿ ನಾಯಕರಾದ ಪ್ರಫುಲ್ ಪಟೇಲ್ ತಮ್, ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆಯಿಂದ ಅಹ್ಮದ್ ಪಟೇಲ್' ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ನಾಳೆ ಈ ಇಬ್ಬರು ಶಾಸಕರು ಕೈಕೊಟ್ಟರೆ ಕಾಂಗ್ರೆಸ್ ನಾಯಕನಿಗೆ ತಮ್ಮ ಶಾಸಕರ ಮತಗಳು ಮಾತ್ರ ಲಭಿಸಬಹುದು. ಈ ನಡುವೆ ಪಟೇಲ್ ಕೂಡ ತಾವೇ ಗೆಲ್ಲುವುದಾಗಿ ಹೇಳಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ತಿಳಿಯಲಿದೆ.
