ಗುಜರಾತಲ್ಲಿ ಇಂದಿನಿಂದ ಮೇಲ್ವರ್ಗ ಮೀಸಲಾತಿ ಜಾರಿ
ಗುಜರಾತ್‌ನಲ್ಲಿ ಇಂದಿನಿಂದ ಮೇಲ್ವರ್ಗ ಮೀಸಲಾತಿ ಶುರು | ಮೀಸಲು ಯೋಜನೆ ಜಾರಿ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ
ಅಹಮದಾಬಾದ್ (ಜ. 14): ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಜನರಿಗೆ ಸೋಮವಾರದಿಂದಲೇ ಶೇ.10 ಮೀಸಲಾತಿ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.
ತನ್ಮೂಲಕ ಮೇಲ್ವರ್ಗದವರಿಗೆ ಮೀಸಲು ನೀಡಿದ ಮೊದಲ ರಾಜ್ಯ ಎಂಬ ಹಿರಿಮೆಗೆ ಪಾತ್ರ ವಾಗಲಿದೆ. ಜನರಲ್ ಕೆಟಗರಿಯಲ್ಲಿನ ಬಡವರಿಗೆ ಮೀಸಲು ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಈ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರವಷ್ಟೇ ತಮ್ಮ ಅಂಕಿತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್
ಸರ್ಕಾರ ಸೋಮವಾರದಿಂದ ಮೀಸಲಾತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಸದ್ಯ ಶೇ.49.5 ರಷ್ಟು ಮೀಸಲಾತಿ ಇದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಶೇ. 22.5 ಹಾಗೂ ಒಬಿಸಿಗಳಿಗೆ ಶೇ.27 ರಷ್ಟು ಮೀಸಲಾತಿ ಇದೆ. ಮೀಸಲಾತಿ ಶೇ.50 ರ ಮಿತಿಯನ್ನು ಮೀರುವಂತಿಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿನಿಂದ ಪಾರಾಗಲು ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ.