ನವದೆಹಲಿ[ಅ.26]: ರಾಷ್ಟ್ರ ರಾಜಧಾನಿಯಲ್ಲಿರುವ ಸಂಸತ್‌ ಭವನ, ರಾಜಪಥ ಮತ್ತು ಕೇಂದ್ರೀಯ ಸಚಿವಾಲಯದ ಕಟ್ಟಡ ನಿರ್ಮಾಣ ಮತ್ತು ನವೀಕರಣದ ವಿನ್ಯಾಸ ಸಿದ್ಧಪಡಿಸುವ ಹೊಣೆಯನ್ನು ಅಹಮದಾಬಾದ್‌ ಮೂಲದ ಕಂಪನಿಯೊಂದು ಪಡೆದುಕೊಂಡಿದೆ. ಬಿಮಲ್‌ ಪಟೇಲ್‌ ಎಂಬುವರ ಮಾಲೀಕತ್ವದ ಎಚ್‌ಸಿಪಿ ಡಿಸೈನ್‌ ಪ್ಲ್ಯಾನಿಂಗ್‌ ಕಂಪನಿಗೆ 229.7 ಕೋಟಿ ರು. ದರದಲ್ಲಿ ಇದರ ಗುತ್ತಿಗೆ ಲಭಿಸಿದೆ.

ಅಹಮದಾಬಾದ್‌ನ ಸೆಂಟ್ರಲ್‌ ವಿಸ್ತಾ ಕಟ್ಟಡ ಹಾಗೂ ಸಾಬರಮತಿ ನದಿ ದಂಡೆಯ ಅಭಿವೃದ್ಧಿಯನ್ನೂ ಇದೇ ಕಂಪನಿ ಮಾಡಿತ್ತು. ಕೇಂದ್ರ ಸರ್ಕಾರವು 448 ಕೋಟಿ ರು. ಖರ್ಚಾಗಬಹುದು ಎಂದು ಮೊದಲು ಅಂದಾಜಿಸಿತ್ತು. ಆದರೆ ಅದಕ್ಕಿಂತ ತುಂಬಾ ಕಡಿಮೆ ಖರ್ಚಿನಲ್ಲಿ ಎಚ್‌ಸಿಪಿ ಡಿಸೈನಿಂಗ್‌ ಕಂಪನಿಯು ಸಂಸತ್ತಿನ ಜೀರ್ಣೋದ್ಧಾರಿತ ಕಟ್ಟಡದ ವಿನ್ಯಾಸಕ್ಕೆ ಮುಂದೆ ಬಂದಿದ್ದರಿಂದ ಟೆಂಡರ್‌ ಅದರ ಪಾಲಾಗಿದೆ. ಒಟ್ಟು 6 ಕಂಪನಿಗಳು ಬಿಡ್‌ ಸಲ್ಲಿಸಿದ್ದವು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಪುರಿ ಹೇಳಿದ್ದಾರೆ.

‘ಸಂಸತ್‌ ಕಟ್ಟಡವನ್ನು ಮರುವಿನ್ಯಾಸ ಮಾಡಲಾಗುತ್ತದೆ ಎಂದರೆ ಅದನ್ನು ಕೆಡಹುವುದಿಲ್ಲ. ಸಂಸತ್‌ ಭವನದ ಮುಂಭಾಗ, ನಾತ್‌ರ್‍ ಹಾಗೂ ಸೌತ್‌ ಬ್ಲಾಕ್‌ ಸೇರಿ ಮೂಲ ವಿನ್ಯಾಸಕ್ಕೆ ಧಕ್ಕೆ ಬರದಂತೆ ಮರು ಅಭಿವೃದ್ಧಿ ಮಾಡಲಾಗುತ್ತದೆ. 2022ರ 75ನೇ ಸ್ವಾತಂತ್ರ ದಿನಾಚರಣೆ ವೇಳೆಗೆ ಮರು ನಿರ್ಮಾಣ ಮುಗಿಯಲಿದೆ. 2023ಕ್ಕೆ ಸೆಂಟ್ರಲ್‌ ವಿಸ್ತಾ ಹಾಗೂ 2024ಕ್ಕೆ ಕೇಂದ್ರೀಯ ಸಚಿವಾಲಯದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಿದೆ ಎಂದು ಹೇಳಿದರು.

ಹೊಸ ಕೇಂದ್ರೀಯ ಸಚಿವಾಲಯದ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ, ಶಾಸ್ತ್ರಿ ಭವನ, ನಿರ್ಮಾನ ಭವನ, ಕೃಷಿ ಭವನ ಮತ್ತು ಉದ್ಯೋಗ ಭವನದಂತಹ ಹಲವಾರು ಕಟ್ಟಡಗಳನ್ನು ಧ್ವಂಸಗೊಳಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಆಧುನಿಕ, ವಿಶ್ವ ಗುಣಮಟ್ಟದ, ಸಮರ್ಥ ಕಟ್ಟಡಗಳನ್ನು ನಿರ್ಮಿಸುವ ಸಮಯ ಬಂದಿದೆ. ಮುಂದಿನ 200 ವರ್ಷಗಳ ಕಾಲ ದೆಹಲಿ ವಿಶ್ವ ರಾಜಧಾನಿಯಾಗಿ ಪ್ರಮುಖ ಪಾತ್ರ ವಹಿಸಲಿದ್ದು, ಮರು ನಿರ್ಮಾಣ ವೇಳೆ ಉತ್ತಮ ತಂತ್ರಜ್ಞಾನಗಳನ್ನು ಬಳಸಿ ದೆಹಲಿಯನ್ನು ವಿಶ್ವ ದರ್ಜೆ ನಗರಿಯನ್ನಾಗಿ ಮಾಡಲಾಗುತ್ತದೆ ಎಂದು ಪುರಿ ಹೇಳಿದ್ದಾರೆ.

ಇದು ಮೋದಿ ಸರ್ಕಾರದ ಮಹತ್ವಕಾಂಶಿ ಯೋಜನೆಯಾಗಿದ್ದು, ಕಾಂಟ್ರಾಕ್ಟರ್‌ಗೆ ವಹಿಸಿ ಟೆಂಡರ್‌ ಟೆಂಡರ್‌ ಪ್ರಕ್ರೀಯೆ ಪೂರ್ಣಗೊಳ್ಳುವ ವರೆಗೆ, ಪಾರಂಪರಿಕ ತಜ್ಞರು, ನಗರ ಹಾಗೂ ಸಂಚಾರಿ ತಜ್ಞರೊಂದಿಗೆ ಸಲಹೆಗಳನ್ನು ಪಡೆಯಲಾಗುತ್ತದೆ. ಸದ್ಯ ಸರ್ಕಾರಿ ಸಚಿವಾಲಯಗಳು ದೆಹಲಿಯ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದು, ಹೊಸ ಕಟ್ಟನ ನಿರ್ಮಾಣ ಬಳಿಕ ಒಂದೆ ಸೂರಿನಲ್ಲಿ ಎಲ್ಲಾ ಸಚಿವಾಲಯಗಳು ಬರಲಿದೆ ಎಂದು ಹೇಳಿದ್ದಾರೆ.

ಜೀರ್ಣೋದ್ಧಾರದ ಯೋಜನೆಯಲ್ಲಿ ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ಹೊಸ ಸಚಿವಾಲಯದ ಕಟ್ಟಡ ಹಾಗೂ ಇತರ ಸರ್ಕಾರಿ ಕಚೇರಿಗಳ ಕಟ್ಟಡಗಳೂ ಇವೆ. ಈಗ ಇವುಗಳ ಬಾಡಿಗೆಗೇ 1000 ಕೋಟಿ ರು. ವೆಚ್ಚ ಮಾಡಲಾಗುತ್ತದೆ.