Asianet Suvarna News Asianet Suvarna News

ಮುಸ್ಲಿಮರ ಬಗ್ಗೆ ಕಾಂಗ್ರೆಸ್ ಕೂಡ ಮೌನ

ಗುಜರಾತಿನಿಂದ ಮುಸ್ಲಿಂ ಲೋಕಸಭಾ ಸಂಸದರ ಪ್ರಾತಿನಿಧ್ಯವೇ ಇಲ್ಲ. ಕಾರಣ ಮುಸ್ಲಿಂನ್ನು ಒಪ್ಪಿಕೊಳ್ಳದ ಹಿಂದೂ ಮತಗಳ ಧ್ರುವೀಕರಣ

Gujarat Elections Analysis By Prashant Natu

2002 ಮತ್ತು 2007ರ ಗುಜರಾತ್ ಚುನಾವಣೆಗಳು ನಡೆದಾಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದೇ, ಹೇಗೆ ನರೇಂದ್ರ ಮೋದಿ ಮುಸ್ಲಿಮರನ್ನು ನಿರ್ಲಕ್ಷಿಸಿ ಇಟ್ಟಿದ್ದಾರೆ ಎಂಬ ಬಗ್ಗೆ. ಆಗ ಗುಜರಾತ್’ನಲ್ಲಿ ಪ್ರಚಾರ ನಡೆಸಿದ್ದ ಸೋನಿಯಾ ಗಾಂಧಿ ಕೇವಲ ಮುಸ್ಲಿಂ ಸಮುದಾಯಕ್ಕೆ 2002ರ ದಂಗೆಗಳಲ್ಲಿ ಆದ ಅನ್ಯಾಯ ಮತ್ತು ಮೋದಿ ಅವರ ಬಹುಸಂಖ್ಯಾತ ತುಷ್ಟೀಕರಣದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅಷ್ಟೇ ಅಲ್ಲ ಮೋದಿ ಎಂದರೆ ಮುಸ್ಲಿಂ ದ್ವೇಷಿ ಎಂದು ದೆಹಲಿಯಿಂದ ಹೋಗಿದ್ದ ಮಾಧ್ಯಮಗಳು ಬಿಂಬಿಸಿದ್ದವು. ಆ ಇದರಿಂದ ಕಾಂಗ್ರೆಸ್‌ಗೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ, ಮೋದಿ ಮತ್ತು ಬಿಜೆಪಿಗೆ ಮಾತ್ರ ಲಾಭವಾಗಿತ್ತು. ಜಾತಿ ಅಸ್ಮಿತೆಯನ್ನು ಮೀರಿ ಹಿಂದೂಗಳು ಮೋದಿಯನ್ನು ಅಪ್ಪಿಕೊಂಡಿದ್ದರಿಂದ, ಮುಖ್ಯಮಂತ್ರಿಯಾಗುವ ಮೊದಲು ಎಂದಿಗೂ ಚುನಾವಣೆಗೆ ನಿಲ್ಲದ ಸಂಘದ ಪ್ರಚಾರಕ ರಾತ್ರೋ ರಾತ್ರಿ ಹಿಂದೂ ಹೃದಯ ಸಾಮ್ರಾಟ್ ಆಗಿ ಕಾಣಿಸತೊಡಗಿದ್ದರು. ಇದಕ್ಕೆ ಪ್ರಚಾರ ಪ್ರಿಯ ಮೋದಿ ಎಷ್ಟು ಕಾರಣರೋ ಅಷ್ಟೇ ಅಗತ್ಯಕ್ಕಿಂತ ಹೆಚ್ಚು ಮೋದಿಯನ್ನು ದೂಷಿಸಿದ ಕಾಂಗ್ರೆಸ್ ಮತ್ತು ದ್ವೇಷಿಸುತ್ತಲೇ ಪ್ರಚಾರ ಕೊಟ್ಟ ಮಾಧ್ಯಮಗಳು ಮುಖ್ಯ ಕಾರಣ.

ರಾಹುಲ್ ಏಕೆ ಮಸೀದಿಗೆ ಹೋಗಲ್ಲ?

ಆದರೆ 2002ರ ದಂಗೆಗಳ ನಂತರದ ಯಾವುದೇ ಚುನಾವಣೆಗಳಲ್ಲಿ ಮುಸ್ಲಿಂ ಕಾರ್ಡ್ ಲಾಭ ತರುತ್ತಿಲ್ಲ ಎಂದು ಅರಿವಿಗೆ ಬಂದ ನಂತರ 2017ರಲ್ಲಿ ನಿಧಾನವಾಗಿ ಕಾಂಗ್ರೆಸ್ ಪಕ್ಷ ಮುಸ್ಲಿಮರ ವಿಷಯವನ್ನು ಮಾತನಾಡುವುದನ್ನೇ ಬಂದ್ ಮಾಡಿದ್ದು, ಈ ಬಾರಿ ಮಾಧ್ಯಮಗಳಲ್ಲಿ ಕೂಡ ಗುಜರಾತ್ ಮುಸ್ಲಿಮರು ಅಪ್ರಸ್ತುತವಾಗಿ ಬಿಟ್ಟರೇನೋ ಎಂಬಷ್ಟರ ಮಟ್ಟಿಗೆ ಮುಸ್ಲಿಮರ ಸ್ಥಿತಿಗತಿಗಳ ಬಗೆಗಿನ ಸುದ್ದಿಗಳು ಕಾಣೆಯಾಗಿವೆ . ಆದರೆ ಆಶ್ಚರ್ಯ ಎಂದರೆ ದೇಶದಲ್ಲೆಲ್ಲ ಗುಜರಾತ್ ದಂಗೆ ಎಂದೇ ಭಾಷಣ ಆರಂಭಿಸುತ್ತಿದ್ದ ಕಾಂಗ್ರೆಸ್ ನಾಯಕರು ಗುಜರಾತ್‌ನಲ್ಲಿ ಮಾತ್ರ ದಂಗೆಗಳ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದಿನಕ್ಕೊಂದು ಹಿಂದೂಗಳ ಮಂದಿರಕ್ಕೆ ಹೋಗುತ್ತಾರೆಯೇ ಹೊರತು, ಮಸೀದಿಗೆ ಹೋಗುವುದೂ ಇಲ್ಲ, ಮುಸ್ಲಿಮರ ವಿಷಯಗಳನ್ನು ಮಾತನಾಡುವುದು ಇಲ್ಲ. ಇದರರ್ಥ ಮುಸ್ಲಿಮರ ವೋಟ್ ಬೇಡ ಎಂದಲ್ಲ ಚುನಾವಣಾ ರಣತಂತ್ರ ಅಷ್ಟೇ.

ಗುಜರಾತ್ ಮತ್ತು ಮುಸ್ಲಿಂ

ಹಾಗೆ ನೋಡಿದರೆ ಗುಜರಾತ್‌ನಲ್ಲಿ 9ರಿಂದ ಹತ್ತು ಪ್ರತಿಶತ ಮುಸ್ಲಿಮರಿದ್ದಾರೆ. ಒಟ್ಟಾರೆ ಮುಸ್ಲಿಮರ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ 182 ಸದಸ್ಯರ ಗುಜರಾತ್ ವಿಧಾನ ಸಭೆಯಲ್ಲಿ ಕನಿಷ್ಠ 18 ಶಾಸಕರು ಇರಬೇಕು. ಆದರೆ ಕಾಂಗ್ರೆಸ್ ಅಧಿಕಾರವಿದ್ದಾಗ ಕೂಡ, ಗುಜರಾತ್‌ನಲ್ಲಿದ್ದ ಗರಿಷ್ಟ ಮುಸ್ಲಿಂ ಶಾಸಕರ ಸಂಖ್ಯೆ ಕೇವಲ 7. 1995ರಲ್ಲಿ ಬಿಜೆಪಿ ಆಡಳಿತ ಆರಂಭವಾದ ನಂತರ, ಅದರಲ್ಲಿಯೂ 2002ರ ದಂಗೆಗಳ ನಂತರ ಶಾಸಕರಾಗಿ ಗೆದ್ದು ಬಂದ ಮುಸ್ಲಿಮರ ಸಂಖ್ಯೆ ಕೇವಲ 3. ಇನ್ನು 2007ರಲ್ಲಿ 5 ಮತ್ತು 2012ರಲ್ಲಿ 2 ಮುಸ್ಲಿಂ ಶಾಸಕರು ಮಾತ್ರ ವಿಧಾನ ಸಭೆಯ ಮೆಟ್ಟಿಲು ಹತ್ತಲು ಸಾಧ್ಯವಾಗಿತ್ತು. ವಿಚಿತ್ರ ಎಂದರೆ ಕಳೆದ 3 ದಶಕಗಳಿಂದ ಯಾವೊಬ್ಬ ಮುಸ್ಲಿಮನು ಕೂಡ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ. ತುರ್ತು ಪರಿಸ್ಥಿತಿ ನಂತರದ ಮೂರು ಚುನಾವಣೆಗಳಲ್ಲಿ ಭರೂಚ್ ನಿಂದ ಅಹ್ಮದ್ ಪಟೇಲ್ ಗೆದ್ದಿದ್ದು ಬಿಟ್ಟರೆ, ಗುಜರಾತಿನಿಂದ ಮುಸ್ಲಿಂ ಲೋಕಸಭಾ ಸಂಸದರ ಪ್ರಾತಿನಿಧ್ಯವೇ ಇಲ್ಲ. ದೆಹಲಿಯಲ್ಲಿ ಕುಳಿತು 25 ವರ್ಷಗಳಿಂದ ಕಾಂಗ್ರೆಸ್’ನ್ನು ನಡೆಸುತ್ತಿರುವ ಸೋನಿಯಾ ಗಾಂಧಿ ಕಣ್ಣು, ಕಿವಿ, ಮೂಗು ಅಹ್ಮದ್ ಪಟೇಲ್ ಸತತವಾಗಿ 5 ಸಲ ರಾಜ್ಯಸಭೆಗೆ ಬರುತ್ತಾರೆಯೇ ಹೊರತು, ಲೋಕಸಭಾ ಚುನಾವಣೆಗೆ ನಿಲ್ಲಲು ಧೈರ್ಯ ಸಾಕಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮುಸ್ಲಿಂ ಅಭ್ಯರ್ಥಿಯನ್ನು ಒಪ್ಪಿಕೊಳ್ಳದ ಹಿಂದೂ ಮತಗಳ ಧ್ರುವೀಕರಣ.

ಮುಸ್ಲಿಮರಿಗೆ ಟಕೆಟ್‌ನೇ ನೀಡಿಲ್ಲ ಬಿಜೆಪಿ!

ಬಹುಶಃ ಕೇವಲ ವರ್ತಮಾನದ ಹಿಂದೂ ಮುಸ್ಲಿಂ ದಂಗೆಗಳ ಕಣ್ಣಿನಿಂದ ನೋಡಿದರೆ ಇದು ಯಾಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟವಾಗಬಹುದು. ಸೋಮನಾಥ್‌ದಿಂದ ಸೂರತ್ ವರೆಗೆ, ಮುಸ್ಲಿಂ ದೊರೆಗಳು ನಡೆಸಿದ ಸತತ ದಾಳಿಗಳಿಂದ ಹಿಡಿದು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹಿಂದೂ ಮುಸ್ಲಿಂ ದಂಗೆಗಳವರೆಗೆ ಗುಜರಾತ್‌ಗೆ ಒಂದು ಕೋಮು ಸಂಘರ್ಷದ ರಕ್ತ ಸಿಕ್ತ ಇತಿಹಾಸವಿದೆ. ಹೀಗಾಗಿಯೇ ಏನೋ ಬಾಬರಿ ಮಸೀದಿ ಧ್ವಂಸದ ನಂತರ ಉತ್ತರ ಪ್ರದೇಶದಲ್ಲಿಯೇ ಬಿಜೆಪಿ ಶಕ್ತಿ ಕುಂಠಿತವಾದರೆ, ಗುಜರಾತ್‌ನಲ್ಲಿ ಮಾತ್ರ ಅಡ್ವಾಣಿ ರಥಯಾತ್ರೆಯ ನಂತರ ಬಿಜೆಪಿ ಬೆಳೆಯುತ್ತಲೇ ಹೋಗಿ 2002ರ ನಂತರ ಪರಾಕಾಷ್ಠೆಗೆ ತಲುಪಿದೆ. ಇವೆಲ್ಲ ಅಧ್ಯಯನಗಳ ನಂತರವೋ ಏನೋ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಸ್ಲಿಮರು ಹೇಗೂ, ಮೋದಿ ವಿರುದ್ಧ ಕಾಂಗ್ರೆಸ್’ಗೆ ಮತ ಹಾಕಿಯೇ ಹಾಕುತ್ತಾರೆ ಎಂಬ ನಿಷ್ಕರ್ಷೆಗೆ ಬಂದು ಮುಸ್ಲಿಂ ವಿಷಯವನ್ನು ಮಾತನಾಡುವುದನ್ನು ನಿಲ್ಲಿಸಿದ್ದು. ಆದರೆ 22 ಮುಸ್ಲಿಮರಿಗೆ ಟಿಕೆಟ್ ಮಾತ್ರ ತಪ್ಪದೆ ನೀಡಿದ್ದಾರೆ. ಆದರೆ ಬಿಜೆಪಿ ಮಾತ್ರ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವ ಗೊಡವೆಗೆ ಹೋಗಿಲ್ಲ.

ಮರೆಯಾಗದ ಭಯದ ಕರಿಮೋಡ

ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಓಲ್ಡ್ ಸಿಟಿಗೆ ಹೋದರೆ ಜಮಾಲ್‌ಪುರ ದರಿಯಾಪುರದಲ್ಲಿ ಸಾಲಾಗಿ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳು ಸಿಗುತ್ತವೆ. ನಮ್ಮ ಜೊತೆ ಅಹಮದಾಬಾದ್ ತೋರಿಸಲು ಬಂದಿದ್ದ ಸ್ಥಳೀಯ ವಾಹನ ಚಾಲಕ ಗಾಲಿಬ್ ಸಾಬ್ ಕುಟುಂಬ ಮೊದಲು ಮಣಿ ನಗರ ಹತ್ತಿರ ಹೊಸ ಬಡಾವಣೆಯಲ್ಲಿ ಇರುತ್ತಿತ್ತಂತೆ. ಆದರೆ ದಂಗೆಗಳ ನಂತರ ಉಸಾಬರಿಯೇ ಬೇಡ ಎಂದು ಮುಸ್ಲಿಮರೇ ಹೆಚ್ಚಾಗಿ ಇರುವ ಓಲ್ಡ್ ಸಿಟಿಗೆ ಬಂದರಂತೆ. ಗಾಲಿಬ್ ಸಾಬ್ ಸಣ್ಣ ದನಿಯಲ್ಲಿ ‘ದಂಗೆಗಳ ನಂತರ ಯಾವಾಗ ಏನು ಆಗುತ್ತದೋ ಎಂಬ ಹೆದರಿಕೆ. ಕುಟುಂಬ ಸುರಕ್ಷಿತವಾಗಿ ಇರಬೇಕಾದರೆ ನಮ್ಮ ನಮ್ಮ ಜನರ ಮಧ್ಯೆ ಇರಬೇಕು ಅದೇ ದೊಡ್ಡ

ರಕ್ಷಣೆ ’ ಎಂದು ಹೇಳುತ್ತಿದ್ದ. ಅವನೇ ಹೇಳುವ ಪ್ರಕಾರ ಮುಸ್ಲಿಂ ಏರಿಯಾಗಳಲ್ಲಿದ್ದ ಹಿಂದೂ ಕುಟುಂಬಗಳು ಕೂಡ ಮನೆ ಖಾಲಿ ಮಾಡಿ ಹೋಗಿವೆಯಂತೆ. ದಂಗೆಗಳು ನಡೆದು 15 ವರ್ಷಗಳು ಕಳೆದ ನಂತರವೂ ಅವತ್ತು ಮೂಡಿದ ಮನದ ಭಯ ಎರಡು ಸಮುದಾಯಗಳಲ್ಲೂ ಕಡಿಮೆಯಾಗಿಲ್ಲ. ತಾಪ್ತಿ ನದಿ ತೋರಿಸಲು ತನ್ನ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದ ರಿಜ್ವಾನ್ ಶೇಖ್ ಎಂಬ ಮಧ್ಯ ವಯಸ್ಕ ಹೇಳುವ ಪ್ರಕಾರ ‘ಮೋದಿ ಹಿಂದುಗಳಿಗೆ ಓಪನ್ ಬೆಂಬಲ ಕೊಟ್ಟಿದ್ದರಿಂದ ನಮಗೆ ದಂಗೆಗಳಲ್ಲಿ ಬಹುತ್ ನೂಕ್ಸಾನ್ ಆಗಿದೆ. ಈ ಬಾರಿ ಹಿಂದುಗಳೇ ಮೋದಿ ವಿರುದ್ಧ ಇದ್ದಾರೆ. ಇಸ್ ಬಾರ್ ಮೋದಿ ಉತರ್ ಸಕ್ತಾ ಹೈ’ ಎಂದು ಹೇಳುತ್ತಿದ್ದ. ರಾಹುಲ್ ಗಾಂಧಿ ಬಗ್ಗೆ ಏನು ಅಭಿಪ್ರಾಯ ಎಂದು ಕೇಳಿದರೆ ‘ಅಚ್ಛಾ ನೌ ಜವಾನ್ ಹೈ ಗುಜರಾತ್ ಮೇ ನರೇಂದ್ರ ಮೋದಿ ಹಾರೇಗಾ ತೋ. 2019ರಲ್ಲಿ ರಾಹುಲ್‌ಭಾಯಿ ವಜೀರ್ ಬನೇಗಾ’ ಎಂದು ಕೈ ಚಿಹ್ನೆ ತೋರಿಸುತ್ತಾ ಹೇಳುತ್ತಿದ್ದ. ಆದರೆ ರಾಹುಲ್ ಬರೀ ಮಂದಿರಗಳಿಗೆ ಹೋಗುವ ಬಗ್ಗೆ ಕೇಳಿ ದಾಗ ‘ಪೊಲಿಟಿಕ್ಸ್ ಹೈ ಸಾಹೆಬ್ ಹಿಂದೂ ವೋಟ್ ಕೋ ಲೇನಾ ಪಡೆ ಗಾ ಮುಸಲ್ಮಾನ ತೋ ಪಂಜೆ ಕೆ ಸಾಥ್ ಹೈ’ ಎಂದು ಹೇಳಿದ.

ಮೋದಿ ಬಗ್ಗೆ ಮುಸ್ಲಿಮರಲ್ಲಿ ಬೇಸರ

ಗುಜರಾತ್‌ನಲ್ಲಿ ಓಡಾಡಿದಾಗ ಕಳೆದ ದಶಕಗಳಲ್ಲಿ ಜಾಗತೀಕರಣದ ನಂತರ ಆಗಿರುವ ಅಭಿವೃದ್ಧಿಯಿಂದ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗದ ಮುಸ್ಲಿಮರಿಗೆ ಲಾಭವಾಗಿದೆ ಅನ್ನಿಸುತ್ತದೆ. ಆದರೆ ಬಡ ಮುಸಲ್ಮಾನ ಎಲ್ಲಿದ್ದಾನೋ ಅಲ್ಲಿಯೇ ಇದ್ದಾನೆ. ಗಮನಿಸಬೇಕಾದ ಅಂಶ ಎಂದರೆ ಯಾವುದೇ ಮುಸ್ಲಿಂನನ್ನು ಮಾತನಾಡಿಸಿದರೂ ಕೂಡ ಮೋದಿ ತಂದ ಅಭಿವೃದ್ಧಿಯಲ್ಲಿ ತಮಗೆ ಸ್ಥಾನ ಇರಲಿಲ್ಲ ತಮ್ಮನ್ನು ದೂರ ಇಡಲಾಗಿದೆ ಎಂಬ ಬೇಸರದ ಮಾತುಗಳು ಕೇಳಿ ಬರುತ್ತವೆ. ಆದರೆ ಮುಸ್ಲಿಮರು ಹೇಗೆ ಮೋದಿಯನ್ನು ದೂರ ಇಟ್ಟರು ಎಂದು ಹೇಳುತ್ತಾರೋ ಇದನ್ನೇ ಬರೋಡಾ ಬಿಜೆಪಿ ಕಚೇರಿಯಲ್ಲಿ ಸಿಕ್ಕಿದ್ದ ಸಂಘ ಪ್ರಚಾರಕ ಒಬ್ಬರಿಗೆ ಕೇಳಿದಾಗ ‘ಅವರೇ ದೂರ ಇರುತ್ತಾರೆ. ಮುಸ್ಲಿಮರದು ಜಗತ್ತಿನ ತುಂಬೆಲ್ಲ ಘೆಟ್ಟೋ ಮಾನಸಿಕತೆ ಅದೇನು ಬರೀ ಗುಜರಾತ್‌ನಲ್ಲಿ ವಿಶೇಷವಾಗಿ ಇರುವುದಲ್ಲ’ಎಂದು ಮರು ಪ್ರಶ್ನೆ ಹಾಕುತ್ತಾರೆ.  ಗುಜರಾತ್‌ನಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವ ಮಟ್ಟದ ಕಂದಕ ಇದೆ ಎಂದರೆ, ನನ್ನನ್ನು ಬರೋಡಾದಿಂದ ಸೂರತ್’ವರೆಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಬಂದ ರವಿ ಭಾಯಿ ಎಂಬ ಮೀನುಗಾರ ಕುಟುಂಬಕ್ಕೆ ಸೇರಿದ ಯುವಕ ಅಲ್ಲಿನ ದಿಲ್ಲಿ ಗೇಟ್ ಬಳಿ ಇರುವ, ಬೇಗಂಪುರಾದಲ್ಲಿ ಹೋಟೆಲ್ ಹೇಗಿದೆ ಎಂದು ನೋಡಿಯಾದ ಮೇಲೆ ಹೊರಗಡೆ ಬಂದು ‘ಇಲ್ಲಿ ವಿಚಿತ್ರ ಪರ್ಫ್ಯೂಮ್ ವಾಸನೆ ಇದೆ. ಇದು ಮುಸ್ಲಿಂ ಮಾಲೀಕನ ಹೋಟೆಲ್ ಎಂದು ನನಗೆ ಅನ್ನಿಸುತ್ತದೆ. ಇಲ್ಲಿ ಬೇಡ ಬನ್ನಿ ಬೇರೆ ಕಡೆ ನೋಡೋಣ’ ಎಂದಾಗ ನಾನು, ನೀನು ಹೋಗು ನಾನು ಇಲ್ಲಿಯೇ ಇರುತ್ತೇನೆ ಎಂದು ಕಳುಹಿಸಿದೆ. ನಂತರ ಬೆಳಿಗ್ಗೆ ಉಪಹಾರ ಸೇವಿಸುವಾಗ ಇದನ್ನು ರಾಜೇಶ್ ಎಂದು ಹೆಸರು ಹೇಳಿಕೊಂಡ ಹೋಟೆಲ್ ಹ್ಯಾಪಿನೆಸ್‌ನ ಮ್ಯಾನೇಜರ್‌ಗೆ ಹೇಳಿದಾಗ ‘ಹೌದು ಸರ್ ಮುಸ್ಲಿಂ ವ್ಯಾಪಾರಿಗಳ ಬಳಿ ಹಿಂದೂಗಳು ಬರಲು ಹಿಂದೇಟು ಹಾಕುತ್ತಾರೆ. ನನ್ನ ಹೆಸರು ಫಯಾಜ್ ಎಂದಿದೆ. ಆದರೆ ನಾನು ಹಿಂದೂ ಹೆಸರು ಇಟ್ಟುಕೊಂಡು ಕೆಲಸ ಮಾಡುತ್ತೇನೆ, ಕ್ಯಾ ಕರು ಪೇಟ್ ಭರನಾ ಹೈ ನಾ ಸರ್’ ಎಂದು ಹೇಳುತ್ತಿದ್ದ.

Gujarat Elections Analysis By Prashant Natu

ಪ್ರಶಾಂತ್ ನಾತು

ಗುಜರಾತಲ್ಲಿ ಕನ್ನಡಪ್ರಭ ಭಾಗ-8

 

Follow Us:
Download App:
  • android
  • ios