ದಿನನಿತ್ಯ ಬಳಕೆ ಮಾಡುವ ಶಾಂಪೂ, ಚಾಕೊಲೇಟ್, ಸೌಂದರ್ಯವರ್ಧಕ ಮೊದಲಾದ ವಸ್ತುಗಳನ್ನು 28% ಸ್ಲಾಬ್'ನಿಂದ ಕೆಳಗಿಳಿಸಲಾಗಿದೆ. ಈ ಐಟಂಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಜಿಎಸ್'ಟಿಗೂ ಮುಂಚೆ ಇದ್ದ ವಿವಿಧ ತೆರಿಗೆಗಳ ಮೊತ್ತಕ್ಕೆ ಜಿಎಸ್'ಟಿ ತೆರಿಗೆ ಬರಲಿದೆ ಎನ್ನಲಾಗುತ್ತಿದೆ.

ಗುವಾಹತಿ(ನ. 10): ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಮಂಡಳಿಯು ಇಂದು 175ಕ್ಕೂ ಹೆಚ್ಚು ಸಾಮಗ್ರಿಗಳ ಮೇಲಿನ ತೆರಿಗೆಯ ಮೊತ್ತವನ್ನು ಕಡಿಮೆ ಮಾಡಿದೆ. 28% ಜಿಎಸ್'ಟಿ ಗುಂಪಿನಲ್ಲಿದ್ದ ಬಹುತೇಕ ಐಟಂಗಳ ತೆರಿಗೆಯನ್ನು ಇಳಿಸಲಾಗಿದೆ. ಇನ್ನೀಗ ಸಿಗರೇಟು, ಮದ್ಯದಂತಹ ಹಾನಿಕಾರಕ ಮತ್ತು ಲಕ್ಷುರಿ ಎನಿಸಿರುವ 40-50 ಐಟಂಗಳಷ್ಟೇ 28% ಟ್ಯಾಕ್ಸ್ ಬ್ರಾಕೆಟ್'ನಲ್ಲಿ ಉಳಿದಿವೆ. ಅಸ್ಸಾಮ್ ರಾಜಧಾನಿಯಲ್ಲಿ ನಡೆದ 23ನೇ ಜಿಎಸ್'ಟಿ ಕೌನ್ಸಿಲ್'ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಎಸ್'ಟಿಯ ಗರಿಷ್ಠ ಟ್ಯಾಕ್ಸ್ ಆಗಿರುವ 28% ತೆರಿಗೆ ಗುಂಪಿನಲ್ಲಿ 68 ಐಟಂಗಳನ್ನು ಶಾರ್ಟ್'ಲಿಸ್ಟ್ ಮಾಡಲಾಗಿತ್ತು. ಆದರೆ, ಕೇಂದ್ರ ಸರಕಾರ ಇನ್ನಷ್ಟು ಚಿಕ್ಕದು ಮಾಡಿ 40-50 ಐಟಂಗಳಿಗಷ್ಟೇ 28% ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ಸರಕಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂ ನಷ್ಟವಾಗುವ ಸಾಧ್ಯತೆ ಇದೆ.

ದಿನನಿತ್ಯ ಬಳಕೆ ಮಾಡುವ ಶಾಂಪೂ, ಚಾಕೊಲೇಟ್, ಸೌಂದರ್ಯವರ್ಧಕ ಮೊದಲಾದ ವಸ್ತುಗಳನ್ನು 28% ಸ್ಲಾಬ್'ನಿಂದ ಕೆಳಗಿಳಿಸಲಾಗಿದೆ. ಈ ಐಟಂಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಜಿಎಸ್'ಟಿಗೂ ಮುಂಚೆ ಇದ್ದ ವಿವಿಧ ತೆರಿಗೆಗಳ ಮೊತ್ತಕ್ಕೆ ಜಿಎಸ್'ಟಿ ತೆರಿಗೆ ಬರಲಿದೆ ಎನ್ನಲಾಗುತ್ತಿದೆ.

ವ್ಯಾಪಾರಿಗಳಿಗೂ ಸಲೀಸು:
ಜಿಎಸ್'ಟಿ ಕೌನ್ಸಿಲ್ ಸಭೆಯಲ್ಲಿ ಇನ್ನೂ ಕೆಲ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಣ್ಣ ಸಂಸ್ಥೆಗಳು ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಕ್ರಮವನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಒಂದೇ ಫಾರ್ಮ್'ನಲ್ಲಿ ರಿಟರ್ನ್ ಫೈಲ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಾವಿರಾರು ಸಣ್ಣಪುಟ್ಟ ಸಂಸ್ಥೆಗಳು ಹೆಚ್ಚು ಗೋಜಲುಗಳಿಲ್ಲದೇ ತೆರಿಗೆ ಪಾವತಿಸಬಹುದಾಗಿದೆ.

ಜುಲೈ 1ರಿಂದ ಕೇಂದ್ರ ಸರಕಾರವು ದೇಶಾದ್ಯಂತ ಜಿಎಸ್'ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ತೆರಿಗೆಗಳನ್ನು 5, 12, 18 ಮತ್ತು 28 ಪರ್ಸೆಂಟ್ ಗುಂಪುಗಳಾಗಿ ವಿಭಾಗಿಸಿದೆ. ಜನಬಳಕೆಯ ಬಹತೇಕ ವಸ್ತುಗಳು 5 ಮತ್ತು 12 ಪರ್ಸೆಂಟ್ ತೆರಿಗೆ ವ್ಯಾಪ್ತಿಗೆ ಬರುತ್ತವೆ.