ಲಂಡನ್‌[ಆ.03]: ಗ್ರೀನ್‌ಲ್ಯಾಂಡ್‌ ಎಂದ ಕೂಡಲೇ ಕಣ್ಮುಂದೆ ಬರುವುದು ವಿಶಾಲವಾಗಿ ಹರಡಿಕೊಂಡಿರುವ ಹಿಮಗಡ್ಡೆಯ ರಾಶಿ. ಆದರೆ, ಯುರೋಪ್‌ನಲ್ಲಿ ಬೀಸಿದ ಬಿಸಿ ಗಾಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ಪರಿಣಾಮವಾಗಿ ಗ್ರೀನ್‌ಲ್ಯಾಂಡ್‌ನಲ್ಲಿರುವ ಹಿಮ ಪದರ ಕರಗಿ ನೀರಾಗಿ ಹರಿಯುತ್ತಿದೆ.

ಒಂದು ತಿಂಗಳ ದಾಖಲೆಯ ತಾಪಮಾನದ ಬಳಿಕ ಜು.31ರಂದು ಗ್ರೀನ್‌ಲ್ಯಾಂಡ್‌ ದಾಖಲೆ ಪ್ರಮಾಣದ ಹಿಮ ಕರಗುವಿಕೆಗೆ ಸಾಕ್ಷಿಯಾಗಿದೆ. ಗುರುವಾರ ಒಂದೇ ದಿನ ಸುಮಾರು 1100 ಕೋಟಿ ಟನ್‌ ಹಿಮ ಕರಗಿ ಸಮುದ್ರ ಸೇರಿದೆ. ಇದು ಒಲಿಂಪಿಕ್ಸ್‌ನಲ್ಲಿ ಬಳಸುವ 44 ಲಕ್ಷ ಈಜುಕೊಳದಲ್ಲಿ ಸಂಗ್ರಹಿಸಬಹುದಾದ ನೀರಿಗೆ ಸಮನಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 2012ರ ಬಳಿಕ ಜು.31 ಗ್ರೀನ್‌ಲ್ಯಾಂಡ್‌ನಲ್ಲಿ ಅತಿ ಹೆಚ್ಚು ಹಿಮ ಕರಗಿದ ದಿನ ಎನಿಸಿಕೊಂಡಿದ್ದು, ಗ್ರೀನ್‌ಲ್ಯಾಂಡ್‌ ಅನ್ನು ಆವರಿಸಿಕೊಂಡಿರುವ ಶೇ.60ರಷ್ಟುಹಿಮ ಪದರದ ಮೇಲ್ಮೈ ಕರಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

1 ಮಿಲಿಮೀಟರ್‌ನಷ್ಟುಹಿಮ ಪದರದ ಮೇಲ್ಮೈ ಮತ್ತು 1 ಸಾವಿರ ಕೋಟಿ ಟನ್‌ಗಳಷ್ಟುಮಂಜುಗಡ್ಡೆ ಸಮುದ್ರ ಸೇರಿದೆ ಎಂದು ಡ್ಯಾನಿಷ್‌ ಪೋಲಾರ್‌ ಸಂಶೋಧನಾ ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಇಷ್ಟುಪ್ರಮಾಣದ ನೀರು ಸಮುದ್ರ ಮಟ್ಟವನ್ನು ಒಂದು ತಿಂಗಳಿನಲ್ಲಿ 0.1 ಮೀಟರ್‌ನಷ್ಟುಏರಿಸಲು ಸಾಕಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜುಲೈ ತಿಂಗಳೊಂದರಲ್ಲೇ ಹಿಮ ಕರಗಿ 19700 ಕೋಟಿ ಟನ್‌ನಷ್ಟುನೀರು ಅಟ್ಲಾಂಟಿಕ್‌ ಸಮುದ್ರ ಸೇರಿದೆ ಎಂದು ಡ್ಯಾನಿಶ್‌ ಹವಾಮಾನ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ. ಅಂದರೆ, ಕರಗಿದ ಹಿಮದ ಪ್ರಮಾಣ 8 ಕೋಟಿ ಒಲಿಂಪಿಕ್ಸ್‌ ಈಜುಕೊಳಗಳಿಗೆ ಸಮನಾಗಿದೆ.

ಗ್ರೀನ್‌ಲ್ಯಾಂಡ್‌ ವಿಶ್ವದಲ್ಲೇ ಎರಡನೇ ಅತಿಹೆಚ್ಚು ಹಿಮ ಪದರ ಹೊಂದಿದ್ದು, ಈ ಋುತುವಿನಲ್ಲಿ ಇಲ್ಲಿನ ಹಿಮ ಕರಗುವಿಕೆಯಿಂದಾಗಿ ಸಮುದ್ರ ಮಟ್ಟ1 ಮಿಲಿ ಮೀಟರ್‌ನಷ್ಟುಏರಿಕೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಗ್ರೀನ್‌ಲ್ಯಾಂಡ್‌ನ ಹಿಮ ಪದರಗಳು ಕರಗುತ್ತವೆ. ಈ ವಿದ್ಯಮಾನ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳುತ್ತಿತ್ತು. ಈ ಅವಧಿಯಲ್ಲಿ 7000 ಕೋಟಿ ಟನ್‌ಗಳಷ್ಟುಮಂಜುಗಡ್ಡೆ ಕರಗುತ್ತಿತ್ತು. ಆದರೆ, ಯುರೋಪ್‌ನಲ್ಲಿ ಬೀಸಿದ ಬಿಸಿಗಾಳಿಯ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಿನಿಂದ ಗ್ರೀನ್‌ಲ್ಯಾಂಡ್‌ನಲ್ಲಿ ಹಿಮ ಪದರ ಸತತವಾಗಿ ಕರಗುತ್ತಲೇ ಇದೆ. ಕಳೆದ ಒಂದು ತಿಂಗಳಿನಿಂದ ದಾಖಲೆಯ ಪ್ರಮಾಣದ ತಾಪಮಾನ ಏರಿಕೆ ಗ್ರೀನ್‌ಲ್ಯಾಂಡ್‌ನಲ್ಲಿ ದಾಖಲಾಗಿದೆ.

ಸಮುದ್ರ ಮಟ್ಟದಿಂದ 3,000 ಮೀಟರ್‌ ಎತ್ತರದಲ್ಲಿ ಹಿಂದೆಂದೂ ಕಂಡಿರದ 2.7 ಡಿಗ್ರಿ ಸೆಲ್ಶಿಯಸ್‌ ತಾಪ ದಾಖಲಾಗಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಬೆಚ್ಚಗಿನ ವಾತಾವರಣ ಇನ್ನಷ್ಟುದಿನ ಮುಂದುವರಿಯುವರಿಯುವ ಸಾಧ್ಯತೆ ಇದ್ದು, ಆಗಸ್ಟ್‌ ಅಂತ್ಯದ ವೇಳೆಗೆ ಹಿಮ ಕರಗುವಿಕೆ ನಿಲ್ಲಬಹದು ಎಂದು ಹವಾಮಾನ ಇಲಾಖೆಯ ತಜ್ಞರು ವಿಶ್ಲೇಷಿಸಿದ್ದಾರೆ.

ಸಾಮಾನ್ಯಕ್ಕಿಂತ ಎರಡೂವರೆ ಪಟ್ಟು ಹೆಚ್ಚು

1100 ಕೋಟಿ ಟನ್‌: ಜು.31 ಬುಧವಾರ ಒಂದೇ ದಿನ ಗ್ರೀನ್‌ಲ್ಯಾಂಡ್‌ನಲ್ಲಿ ಕರಗಿದ ಮಂಜುಗಡ್ಡೆ

44 ಲಕ್ಷ ಈಜುಕೊಳ: ಒಲಿಂಪಿಕ್ಸ್‌ನಲ್ಲಿ ಬಳಸುವ 44 ಲಕ್ಷ ಈಜುಕೊಳದಷ್ಟುಗಾತ್ರದ ಐಸ್‌ ಈಗ ನೀರು

19700 ಕೋಟಿ ಟನ್‌: ಜುಲೈ ತಿಂಗಳೊಂದರಲ್ಲೇ ಕರಗಿ ನೀರಾಗಿ ಸಮುದ್ರ ಸೇರಿದ ಐಸ್‌ ಪ್ರಮಾಣ

8 ಕೋಟಿ ಈಜುಕೊಳ: ಅಂದರೆ, ಕರಗಿದ ಐಸ್‌ ಪ್ರಮಾಣ 8 ಕೋಟಿ ಒಲಿಂಪಿಕ್ಸ್‌ ಈಜುಕೊಳದಷ್ಟು

7000 ಕೋಟಿ ಟನ್‌: ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಕರಗುವ ಮಂಜುಗಡ್ಡೆಯ ಪ್ರಮಾಣ

ಎಲ್ಲಿದೆ ಗ್ರೀನ್‌ಲ್ಯಾಂಡ್‌?

ಯುರೋಪ್‌, ಉತ್ತರ ಅಮೆರಿಕ ಖಂಡಗಳ ನಡುವೆ ಮೇಲ್ಭಾಗದಲ್ಲಿ ಇರುವ ಪ್ರದೇಶ. ಉತ್ತರಕ್ಕೆ ಆಕ್ರ್ಟಿಕ್‌ ಹಾಗೂ ದಕ್ಷಿಣಕ್ಕೆ ಅಟ್ಲಾಂಟಿಕ್‌ ಮಹಾಸಾಗರಗಳಿದ್ದು ಉತ್ತರ ಧ್ರುವಕ್ಕೆ ಅತಿ ಸನಿಹದಲ್ಲಿರುವ ಭೂಭಾಗ. 21.66 ಲಕ್ಷ ಚದರ ಕಿ.ಮೀ. ವಿಸ್ತೀರ್ಣವಿರುವ ಗ್ರೀನ್‌ಲ್ಯಾಂಡ್‌ನ 17.56 ಲಕ್ಷ ಚದರ ಕಿ.ಮೀ. ಭಾಗದಲ್ಲಿ ಮಂಜುಗಡ್ಡೆಯ ಹೊದಿಕೆಯಿದೆ. ಮೈನಸ್‌ 50ರಿಂದ ಗರಿಷ್ಠ 14 ಡಿಗ್ರಿ ಸೆಲ್ಷಿಯಸ್‌ ಇಲ್ಲಿನ ಸಾಮಾನ್ಯ ತಾಪಮಾನ.

ಯಾಕೆ ಕರಗುತ್ತಿದೆ?

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಐಸ್‌ಲ್ಯಾಂಡ್‌ನಲ್ಲೂ ಉಷ್ಣಾಂಶ ಹೆಚ್ಚಳವಾಗಿದೆ. ಇದರಿಂದಾಗಿ ಮಂಜುಗಡ್ಡೆ ಕರಗಿ ನೀರಾಗಿ ಸಮುದ್ರ ಸೇರುತ್ತಿದೆ.

ಏನು ಅಪಾಯ?

ಹೀಗೆ ಭಾರೀ ಪ್ರಮಾಣದಲ್ಲಿ ಕರಗುವ ಮಂಜುಗಡ್ಡೆ ನೀರಾಗಿ ಸಾಗರ ಸೇರುತ್ತದೆ. ಅಪಾರ ನೀರಿನ ಸೇರ್ಪಡೆಯಿಂದಾಗಿ ಸಾಗರ ಮಟ್ಟಏರಿಕೆಯಾಗಿ ಭೂಭಾಗಕ್ಕೆ ಅಪಾಯ ಕಟ್ಟಿಟ್ಟಬುತ್ತಿ.