ಹತ್ತು ಲಕ್ಷ ಹೂಡಿ ಕೋಟಿ ಗಳಿಸಿದಾಕೆ; ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ಪ್ರಿಯಾ

news | Saturday, February 17th, 2018
Suvarna Web Desk
Highlights

ಕಾಲೇಜಿನಲ್ಲಿ ಓದುವಾಗಲೇ ಉದ್ಯಮ ಸ್ಥಾಪಿಸಬೇಕು ಎಂದು ಮನಸ್ಸಾಗುತ್ತದೆ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿ ಇಲ್ಲ. ಮಾರ್ಗದರ್ಶಕರಂತೂ ಮೊದಲೇ ಇಲ್ಲ. ಆದರೆ ಸ್ವಂತವಾಗಿ ಏನಾದರೂ ಮಾಡಬೇಕು ಎನ್ನುವ ತುಡಿತವಿತ್ತು. ಆ ತುಡಿತವೇ ಇಂದು ಪ್ರಿಯಾಂಕ ಅಗರ್‌ವಾಲ್ ಎನ್ನುವ ಹುಡುಗಿಯನ್ನು ಇಂದು ದೊಡ್ಡ  ಉದ್ಯಮಿಯಾಗಿಸಿದೆ. 

ಬೆಂಗಳೂರು (ಫೆ.17): ಕಾಲೇಜಿನಲ್ಲಿ ಓದುವಾಗಲೇ ಉದ್ಯಮ ಸ್ಥಾಪಿಸಬೇಕು ಎಂದು ಮನಸ್ಸಾಗುತ್ತದೆ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿ ಇಲ್ಲ. ಮಾರ್ಗದರ್ಶಕರಂತೂ ಮೊದಲೇ ಇಲ್ಲ. ಆದರೆ ಸ್ವಂತವಾಗಿ ಏನಾದರೂ ಮಾಡಬೇಕು ಎನ್ನುವ ತುಡಿತವಿತ್ತು. ಆ ತುಡಿತವೇ ಇಂದು ಪ್ರಿಯಾಂಕ ಅಗರ್‌ವಾಲ್ ಎನ್ನುವ ಹುಡುಗಿಯನ್ನು ಇಂದು ದೊಡ್ಡ  ಉದ್ಯಮಿಯಾಗಿಸಿದೆ. 


ಅದು 2011 ರ ಸಮಯ ದೆಹಲಿಯ ಪ್ರಿಯಾಂಕಾ ಅಗರ್ವಾಲ್‌'ಗೆ ಆಗಿನ್ನೂ ಇಪ್ಪತ್ತು ವರ್ಷ. ಕಾಲೇಜಿನಲ್ಲಿ ಓದುತ್ತಿದ್ದಾಗ, ಓದಿ ಮುಂದೆ  ಸಂಪಾದನೆಗೆ ತೊಡಗಬೇಕು. ಅದಕ್ಕಿಂತ ಉತ್ತಮ ಎಂದರೆ ಓದುವಾಗಿನಿಂದಲೇ  ಸಂಪಾದನೆಯಲ್ಲಿ ತೊಡಗುವುದು ಎಂದು  ಅದಕ್ಕಾಗಿ ಒಂದಷ್ಟು ತಯಾರಿಯನ್ನು ಆರಂಭಿಸಿಯೇಬಿಟ್ಟರು. ಆದರೆ ಇದಕ್ಕೆಲ್ಲಾ  ಮನೆಯವರು ಸುತಾರಾಂ ಒಪ್ಪದಿದ್ದಾಗ  ಓದನ್ನು ಪೂರ್ಣಗೊಳಿಸದೇ ಅನ್ಯ ದಾರಿ ಇರಲಿಲ್ಲ.  ಮನೆಯವರು, ಹಿತೈಷಿಗಳ ಒತ್ತಡಕ್ಕೆ
ಮಣಿದು ಓದನ್ನು ಮುಂದುವರಿಸಿ ಪದವಿ ಹಂತದ ಶಿಕ್ಷಣ ಮುಗಿದ ತಕ್ಷಣ  ಸೌಂದರ್ಯವರ್ಧಕಗಳ ಮಾರಾಟಕ್ಕೆ  ಮುಂದಡಿ ಇಡುತ್ತಾಳೆ. ಇದಕ್ಕಾಗಿ ‘ಕಲ್ಲೋಸ್ ಕಾಸ್ಮೆಟಿಕ್ಸ್’ ಎನ್ನುವ ಸಣ್ಣ  ಸೌಂದರ್ಯ ವರ್ಧಕಗಳ ಉದ್ಯಮವನ್ನು ಆರಂಭಿಸುತ್ತಾಳೆ. ಇದಕ್ಕಾಗಿ ತಂದೆಯಿಂದ ಹತ್ತು ಲಕ್ಷ ರುಪಾಯಿಗಳ  ಬಂಡವಾಳ ಪಡೆದುಕೊಂಡು ಪ್ರಾರಂಭಿಸಿದ ಉದ್ಯಮ ಇಂದು ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.
ಸದ್ಯ ವಾರ್ಷಿಕ ಇಪ್ಪತ್ತು ಕೋಟಿಗೂ ಅಧಿಕ ವಹಿವಾಟು ಮಾಡುವ ಮೂಲಕ ಏಳು ವರ್ಷದಲ್ಲಿಯೇ ಇಪ್ಪತ್ತೇಳರ ಪ್ರಿಯಾಂಕಾ ಉದ್ಯಮವನ್ನು
ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗುತ್ತಿದ್ದಾರೆ.

ತಂದೆಯ ವ್ಯಾಪಾರವೇ ಸ್ಪೂರ್ತಿ

ಪ್ರಿಯಾಂಕಾಗೆ ಇತಿಹಾಸ, ಸಮಾಜ ಶಾಸ್ತ್ರಗಳಲ್ಲಿ ಆಸಕ್ತಿ ಇತ್ತು. ಆದರೆ ತಂದೆ ಮಾಡುತ್ತಿದ್ದ ವ್ಯಾಪಾರವನ್ನು ಹತ್ತಿರದಿಂದ ನೋಡುತ್ತಾ ನಾನೂ ಕೂಡ ಸ್ವಂತ  ಉದ್ಯಮ ಸ್ಥಾಪಿಸಬೇಕು ಎಂದು ನಿರ್ಧಾರ ಮಾಡುತ್ತಾಳೆ. ಅದರಂತೆ ತನ್ನ ನಿರ್ಧಾರವನ್ನು ಎಲ್ಲರಿಗೂ ಹೇಳಿದಾಗ ತಂದೆಯಿಂದಲೇ ಮೊದಲ ವಿರೋಧ ವ್ಯಕ್ತವಾಗುತ್ತದೆ. ಉದ್ಯಮ ಮಾಡಬೇಕು ಎನ್ನುವ ಮನಸ್ಸಿದ್ದರೆ ನನ್ನ ಉದ್ಯಮವನ್ನೇ ಮುಂದುವರೆಸಿಕೊಂಡು ಹೋಗು, ಆದರೆ
ಸೌಂದರ್ಯವರ್ಧಕಗಳ ಉತ್ಪಾದನೆ, ವ್ಯಾಪಾರ ಎಲ್ಲವೂ ಕಷ್ಟ, ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಕೆಲವು ಕಡೆಗಳಲ್ಲಿ ಕೆಲಸ ಮಾಡಿ ಸೂಕ್ತ ಅನುಭವ ಗಳಿಸಿದ ನಂತರ ಒಳ್ಳೆಯ ನಿರ್ಧಾರಕ್ಕೆ
ಬಾ. ಉದ್ಯಮ ಎನ್ನುವುದು ಅನುಭವವಿಲ್ಲದೇ ಹೋದವರನ್ನು ಸುಲಭವಾಗಿ ಗೆಲ್ಲಿಸುವುದಿಲ್ಲ ಎಂದು ಸಲಹೆ ನೀಡುತ್ತಾರೆ. ಆದರ ಹಠ ಬಿಡದ ಪ್ರಿಯಾಂಕ ಹತ್ತು ಲಕ್ಷ ರುಪಾಯಿ ನೀಡಿ. ಲಾಸ್ ಆದರೆ ಇಷ್ಟೇ ಆಗಲಿ. ಆದರೆ ನಾನು ಇದನ್ನು ಮುಂದೆ ಒಳ್ಳೆಯ ಮಟ್ಟಕ್ಕೆ ಕೊಂಡೊಯ್ಯುತ್ತೇನೆ. ನಾನು ಮುಂದೆ ಉನ್ನತ ಶಿಕ್ಷಣಕ್ಕೆ ಹೋದರೂ ಕೂಡ ಇಷ್ಟೇ ಹಣ ಖರ್ಚಾಗುತ್ತದೆ. ಹಾಗಾಗಿ ಇದನ್ನೇ ಒಂದು ಅನುಭವ ಮಾಡಿಕೊಳ್ಳುತ್ತೇನೆ ಎಂದು ಕೇಳುತ್ತಾಳೆ. ಇದಕ್ಕೊಪ್ಪಿದ ತಂದೆ ಹತ್ತು ಲಕ್ಷವನ್ನು ನೀಡುತ್ತಾರೆ.
 

ಸವಾಲಿನ ಹಾದಿ
ಯಾವುದೇ ಮಾರ್ಗದರ್ಶನ, ಅನುಭವ ಇಲ್ಲದೇ ಇದ್ದರೂ ಕಾಸ್ಮೆಟಿಕ್  ವ್ಯಾಪಾರಕ್ಕೆ ಇಳಿದ ಪ್ರಿಯಾಂಕಾಗೆ ಪ್ರಾರಂಭದಲ್ಲಿ ಸಿಕ್ಕಿದ್ದು ಸವಾಲಿನ ಹಾದಿ. ದಾಸ್ತಾನಾದ ವಸ್ತುಗಳನ್ನು ಯಾವ ರೀತಿ ಮಾರ್ಕೆಟ್ ಮಾಡಬೇಕು, ಅದಕ್ಕೆ
ಮಾಡಿಕೊಳ್ಳಬೇಕಾದ ಪೂರ್ವ ತಯಾರಿಗಳೇನು ಎನ್ನುವ ಯಾವ ವಿಚಾರಗಳೂ ಗೊತ್ತಿರಲಿಲ್ಲ. ಹೀಗಿದ್ದಾಗ ತಂದೆಯ ಬಳಿ ಕೆಲಸ ಮಾಡುತ್ತಿದ್ದ ಕೆಲವು ಕೆಲಸಗಾರರನ್ನು ಕರೆದುಕೊಂಡು ಸೌಂದರ್ಯವರ್ಧಕಗಳ ಮಾರಾಟಕ್ಕೆ ಮುಂದಾದರು. ಪ್ರಾರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಕೂಡ ಪ್ರಿಯಾಂಕಾ ಮಾತಿನ ಶೈಲಿ, ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು  ನಡೆಸಿಕೊಂಡ ರೀತಿಯಿಂದ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿದರು. ಸುಮಾರು ಒಂದೂವರೆ ವರ್ಷದ ತನಕವೂ ಸಾಧಾರಣವಾಗಿಯೇ ನಡೆದ ವ್ಯಾಪಾರ ಡಾಬರ್, ಎಚ್‌ಯುಎಲ್‌ನ ಉತ್ಪನ್ನಗಳೊಂದಿಗೆ ಮಾಡಿಕೊಂಡ ಒಪ್ಪಂದದಿಂದಾಗಿ ವ್ಯಾಪಾರ ವೇಗಗತಿ ಪಡೆದುಕೊಳ್ಳುತ್ತದೆ. ಹೂಡಿಕೆ ಮಾಡಿದ್ದ ಬಂಡವಾಳ ಒಂದೇ ವರ್ಷಕ್ಕೆ ವಾಪಸ್ಸಾಗುತ್ತದೆ.
 

ಕೋಟಿ ದಾಟಿದ ಕತೆ
ಹೂಡಿಕೆ ಮಾಡಿದ ಹಣವೆಲ್ಲಾ ಲಾಭವಾಗಿ ವಾಪಸ್ ಬಂದ ನಂತರ ಪ್ರಿಯಾಂಕಾಗೆ ಯಾವುದೇ ಭಯವಿರಲಿಲ್ಲ. ಲಾಭವಾಗಲೀ, ನಷ್ಟವಾಗಲಿ  ಇನ್ನಷ್ಟು ದೊಡ್ಡ ಸಾಹಸಕ್ಕೆ ಕೈ ಹಾಕಲು ಅವಳ ಮನಸ್ಸು ತುಡಿಯುತ್ತಿತ್ತು. ಅದಕ್ಕಾಗಿ ಸುತ್ತ ಮುತ್ತಲ ಸಣ್ಣ ಸಣ್ಣ ನಗರಗಳಿಗೂ ತೆರಳಿ ವ್ಯಾಪಾರ ಮಳಿಗೆ ಆರಂಭಿಸಿದಳು. ‘ಗ್ರಾಹಕರೊಂದಿಗೆ ಒಳ್ಳೆಯ ಸಂಬಂಧ, ಒಳ್ಳೆಯ ಸೇವೆ, ಕೈಗೆಟಕುವ ಹಾಗೆ ಉದ್ಯಮ ನಡೆಸಿದರೆ ಖಂಡಿತ ಗೆಲ್ಲಬಹುದು’ ಎಂದು ತಮ್ಮ ಯಶಸ್ಸಿನ ಗುಟ್ಟು ಹೇಳುವ ಪ್ರಿಯಾಂಕ ಉದ್ಯಮಿಯಾದ ನಂತರವೇ ಎಂಬಿಎ ಪದವಿಗಳಿಸಿದ್ದು.

ಸದ್ಯ‘ಕಲ್ಲೋಸ್’ ಎನ್ನುವ ಸೌಂದರ್ಯವರ್ಧಕಗಳ ತಯಾರಿಕಾ ಕಂಪನಿಯನ್ನು ಪ್ರಾರಂಭ ಮಾಡಿ ಅಲ್ಲಿಯೂ ಕೂಡ ಯಶಸ್ಸಿನ ಹೆಜ್ಜೆಗಳನ್ನು ದಾಖಲಿಸುತ್ತಿದ್ದಾರೆ ಪ್ರಿಯಾಂಕ. ಮೊದಲು ಮಾರಾಟಗಾರ್ತಿಯಾಗಿ ವೃತ್ತಿ ಪ್ರಾರಂಭಿಸಿ ಈಗ ಒಂದು
ಕಂಪನಿಯನ್ನೇ ಪ್ರಾರಂಭಿಸಿ ಕೋಟ್ಯಾಂತರ ರುಪಾಯಿ ವಹಿವಾಟು ನಡೆಸುತ್ತಿರುವ ಚಿಕ್ಕ ವಯಸ್ಸಿನ ಪ್ರಿಯಾಂಕಾ ಅಗರ್ವಾಲ್ ಮಹಿಳಾ ಉದ್ಯಮಿಗಳ ಪಾಲಿನ ದೊಡ್ಡ ಸ್ಪೂರ್ತಿ.

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk