ನವದೆಹಲಿ, [ಅ.31]:  ವಾಟ್ಸಪ್ ನಲ್ಲಿ ಎಗ್ಗಿಲ್ಲದೇ ಹರಡುತ್ತಿದ್ದ ಪ್ರಚೋದನಕಾರಿ ಮೆಸೇಜ್ ಗಳು ಕೋಮು ಸೌಹಾರ್ದತೆಯನ್ನು ಹಾಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರ ಇದಕ್ಕೆ ಕಡಿವಾಣ ಹಾಕುವಂತೆ ವಾಟ್ಸಪ್ ಗೂ ಸೂಚಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪ್ರಚೋದನಕಾರಿ ಮೆಸೇಜ್ ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾದಂತಿದೆ. 

ಪ್ರಚೋದನಕಾರಿ, ಹಿಂಸಚಾರಕ್ಕೆ ಉತ್ತೇಜನ ನೀಡುವಂತಹ ಮೆಸೇಜ್ ಹರಡುತ್ತಿರುವವರ ಲೊಕೇಶನ್ ಹಾಗೂ ಗುರುತಿನ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಿ ಎಂದು ಕೇಂದ್ರ ಸರ್ಕಾರ ವಾಟ್ಸಪ್ ನ್ನು ಕೇಳಿದೆ. 

ವಾಟ್ಸಪ್ ಅಧ್ಯಕ್ಷ  ಕ್ರಿಸ್ ಡೇನಿಯಲ್ಸ್ ಜೊತೆ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಸಭೆ ನಡೆಸಿದ್ದು, ಪ್ರಚೋದನಕಾರಿ, ಹಿಂಸಚಾರಕ್ಕೆ ಉತ್ತೇಜನ ನೀಡುವಂತಹ ಮೆಸೇಜ್ ಹರಡುತ್ತಿರುವವರ ವಿವರಗಳನ್ನು ಕೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಕೆಂದ್ರ ಸರ್ಕಾರದ ಸೂಚನೆಗೆ ಸ್ಪಂದಿಸುವುದಾಗಿ ವಾಟ್ಸಪ್ ಭರವಸೆ ನೀಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇದ್ರಿಂದ ಇನ್ಮುಂದೆ ವಾಟ್ಸಪ್ ನಲ್ಲಿ ಪ್ರಚೋದನಕಾರಿ ಮೆಸೇಜ್ ಮಾಡುವುದಕ್ಕೂ ಮುನ್ನ ಒಂದು ಸಾರಿ ಯೋಚಿಸಬೇಕು. ಇಲ್ಲವಾದಲ್ಲಿ ಶಿಕ್ಷೆಯಂತೂ ಕಟ್ಟಿಟ್ಟ ಬುತ್ತಿ.