Asianet Suvarna News Asianet Suvarna News

ಮನೆಗೆಲಸದವರಿಗೆ ವಿದೇಶಕ್ಕೆ ಹೋಗಲು ಸರ್ಕಾರಿ ತರಬೇತಿ

ದೇಶ, ವಿದೇಶಗಳಲ್ಲಿ ಗೃಹ ಮತ್ತು ಕಚೇರಿ ಸಂಬಂಧಿ ಕಾರ್ಮಿಕರ (ಡೊಮೆಸ್ಟಿಕ್‌ ವರ್ಕರ್ಸ್‌) ಬೇಡಿಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿರುವ ಕಾರ್ಮಿಕರನ್ನು ಅಂತಾರಾಷ್ಟ್ರೀಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಗೊಳಿಸಿ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ.

Govt to provide training to domestic helps
  • Facebook
  • Twitter
  • Whatsapp

ಬೆಂಗಳೂರು: ದೇಶ, ವಿದೇಶಗಳಲ್ಲಿ ಗೃಹ ಮತ್ತು ಕಚೇರಿ ಸಂಬಂಧಿ ಕಾರ್ಮಿಕರ (ಡೊಮೆಸ್ಟಿಕ್‌ ವರ್ಕರ್ಸ್‌) ಬೇಡಿಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿರುವ ಕಾರ್ಮಿಕರನ್ನು ಅಂತಾರಾಷ್ಟ್ರೀಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಗೊಳಿಸಿ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇದಕ್ಕಾಗಿ ವಿಶ್ವಸಂಸ್ಥೆ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಮಿಕರನ್ನು ಸಜ್ಜುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇಂಥ ಅಸಂಘಟಿತ ಕಾರ್ಮಿಕರಿಗೆಂದೇ ಪ್ರತ್ಯೇಕ ಗೃಹ ಬಳಕೆದಾರರ ಮಂಡಳಿ ರಚಿಸುವ ಆಲೋಚನೆಯನ್ನೂ ಮಾಡುತ್ತಿದೆ.

ರಾಜ್ಯದಲ್ಲಿ ಮನೆಗೆಲಸ, ಕಚೇರಿ ಕೆಲಸ, ಅಡುಗೆ, ಹೋಟೆಲ್‌ ಕೆಲಸಗಳು, ಹೌಸ್‌ ಕೀಪಿಂಗ್‌, ಕಟ್ಟಡ ನಿರ್ವಹಣೆ, ಪಾರ್ಕ್ ಹಾಗೂ ಫಾರಂಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು ಸುಮಾರು 45 ಲಕ್ಷಕ್ಕೂ ಅಧಿಕ ಇದ್ದಾರೆ.

ಗೃಹ ಬಳಕೆ ಕಾರ್ಮಿಕರು ಮಕ್ಕಳನ್ನು ತಮ್ಮ ಕ್ಷೇತ್ರ ದಲ್ಲೇ ದುಡಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ತಳಮಟ್ಟದ ಕೆಲಸಗಳಿಗೂ ಸರ್ಕಾರ ಮೌನ್ಯತೆ ನೀಡಿ ಸೌಲಭ್ಯ ಒದಗಿಸಿದರೆ ಆ ಕೆಲಸದ ಮಹತ್ವ ಹೆಚ್ಚುತ್ತದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆ. ಆದ್ದ ರಿಂದ ತರಬೇತಿ ನೀಡಿ ಉದ್ಯೋಗ ಕೊಡಿಸಲು ನಿಗಮ ಯತ್ನಿಸುತ್ತಿದೆ. ಹಾಗೆಯೇ ಪ್ರತ್ಯೇಕ ಮಂಡಳಿ ರಚಿಸುವ ಚಿಂತನೆಯೂ ಇದೆ.
ಮುರಳಿಧರ ಹಾಲಪ್ಪ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ

ಇಂಥ 5 ಲಕ್ಷ ಕಾರ್ಮಿಕರಿಗೆ ವಿದೇಶಗಳಲ್ಲಿ ಬೇಡಿಕೆಯಿದ್ದು, ರಾಜ್ಯದಲ್ಲೂ 10 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗಾವಕಾಶಗಳಿವೆ. ಆದ್ದರಿಂದ ರಾಜ್ಯದಲ್ಲಿರುವ ಕಾರ್ಮಿಕರನ್ನೇ ತರಬೇತುಗೊಳಿಸಿ ದೇಶ ಹಾಗೂ ವಿದೇಶಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಲು ರಾಜ್ಯ ಸರ್ಕಾರ ನಿಶ್ಚಯಿಸಿದೆ. ಅಂದ ಹಾಗೆ ಈ ಕಾರ್ಮಿಕರೆಲ್ಲಾ ಅಸಂಘಟಿತ ವಲಯ ದಲ್ಲಿದ್ದು, ಇವರು ಕನಿಷ್ಠ ಸೌಲಭ್ಯಗಳಿಂದ ಬಹಳ ದೂರದಲ್ಲಿದ್ದಾರೆ.

ಆದ್ದರಿಂದ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ವಿಶ್ವ ಸಮುದಾಯದ ಸಂಸ್ಥೆಗಳ ನೆರವು ಪಡೆದು ಕಾರ್ಮಿಕರಿಗೆ ಸೂಕ್ತ ಕೌಶಲ್ಯ ತರಬೇತಿ, ಉದ್ಯೋಗ ಅವಕಾಶ ಮತ್ತು ಕನಿಷ್ಠ ವೇತನ, ಸೌಲಭ್ಯ ಮತ್ತು ವೈದ್ಯಕೀಯ ನೆರವುಗಳು ಸಿಗುವಂತೆ ಮಾಡಲು ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.

ರಾಜ್ಯದಲ್ಲಿ ಈ ವರ್ಷ ಒಂದು ಲಕ್ಷ ಕಾರ್ಮಿಕರನ್ನು ಗುರುತಿಸಿ ತರಬೇತಿ ನೀಡಲು ಆಲೋಚಿಸಲಾಗಿದ್ದು, ಆರಂಭಿಕ 10,000 ಕಾರ್ಮಿಕರ ಕೌಶಲ್ಯ ವೃದ್ಧಿಗೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ವಿಶ್ವಸಂಸ್ಥೆಯ ಯೋಜನಾ ಸಂಸ್ಥೆ, ವಿಶ್ವ ಕಾರ್ಮಿಕ ಸಂಸ್ಥೆಯ ಭಾರತೀಯ ಸಂಸ್ಥೆ, ಕಾರ್ಮಿಕ ಸಂಘಟನೆಗಳು, ಗೃಹ ಬಳಕೆದಾರರ ಮಂಡಳಿಗಳು ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ ಕೈ ಜೋಡಿಸಿವೆ.

ವಿದೇಶಗಳಲ್ಲಿ 4 ಲಕ್ಷ ಗೃಹ ಕಾರ್ಮಿಕರು: ರಾಜ್ಯದಲ್ಲಿರುವ ಗೃಹ ಕಾರ್ಮಿಕರಾದ ಮನೆ ಸ್ವಚ್ಛ ಮಾಡುವವರು, ಅಡುಗೆ ಕೆಲಸದವರು, ಬಟ್ಟೆಒಗೆಯುವವರು, ಕಟ್ಟಡ ಕಾರ್ಮಿಕರು, ಕೊಳಾಯಿ, ಕಚೇರಿಗಳು, ಉದ್ಯಾನಗಳು, ಕಟ್ಟಡಗಳ ನಿರ್ವಹಣೆ, ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ ಯಾವುದೇ ತರಬೇತಿ ಇಲ್ಲ. ಪ್ರಮಾಣ ಪತ್ರವಂತೂ ಇರುವುದೇ ಇಲ್ಲ. ಆದ್ದರಿಂದ ಈ ಕಾರ್ಮಿಕರಿಗೆ ಉನ್ನತ ಸಂಸ್ಥೆಗಳಲ್ಲಿ ಕೆಲಸ ಸಿಗದೆ ಇವರು ಮನೆಗೆಲಸಗಳಿಗಷ್ಟೇ ಸೀಮಿತವಾದ ಅಸಂಘಟಿತ ಕಾರ್ಮಿಕರಾಗಿದ್ದಾರೆ.

ಇವರಿಗೆ ಸೂಕ್ತ ಕೌಶಲ್ಯ ಪಡೆದಿರುವ ಪ್ರಮಾಣಪತ್ರ, ಆರೋಗ್ಯ ದೃಢೀಕರಣ ಪತ್ರ ವಿದ್ದರೆ, ದೇಶ, ವಿದೇಶಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಸದ್ಯ ಕೊಲ್ಲಿ ದೇಶಗಳು, ಆಸ್ಪ್ರೇಲಿಯ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರೆಲ್ಲಾ ಬಹುತೇಕ ಪಂಜಾಬ್‌, ಗುಜರಾತ್‌, ಆಂಧ್ರಪ್ರದೇಶ, ಹರಿಯಾಣ, ಕೇರಳದಿಂದ ಏಜೆನ್ಸಿ ಮತ್ತು ಸಂಬಂಧಿಕರ ಕಡೆಯಿಂದ ಹೋದವರಾಗಿದ್ದಾರೆ. ಆದರೂ ವಿದೇಶಗಳಲ್ಲಿ ಗೃಹ ಬಳಕೆ ಕಾರ್ಮಿಕರಿಗೆ ಇನ್ನೂ ಬೇಡಿಕೆ ಇದೆ.

ಮಹಾರಾಷ್ಟ್ರ ಮಾದರಿ ಮಂಡಳಿ: ಹಾಗೆಯೇ ದೇಶದ ವಿವಿಧ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಕೌಶಲ್ಯ ಅಭಿವೃದ್ಧಿ ನಿಗಮ, ಕಾರ್ಮಿಕರಿಗೆ ಒಂದೆರಡು ತಿಂಗಳ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಿದೆ. ಕೆಲಸ ನಿರ್ವಹಿಸಲು ಸದೃಢರು ಎಂಬ ಅರ್ಹತಾ ಪತ್ರವನ್ನೂ ಕೊಡಲಿದೆ. ವ್ಯಕ್ತಿತ್ವ ವಿಕಸನ, ಭಾಷೆ ತರಬೇತಿ, ವಿದೇಶ ಉದ್ಯೋಗ ಬಯಸುವವರಿಗೆ ಪಾಸ್‌ಪೋರ್ಟ್‌ ಪಡೆಯಲು ನೆರವು ನೀಡಲಿದೆ. ಮುಖ್ಯವಾಗಿ ಈ ಕಾರ್ಮಿಕರಿಗೆ ಕಡ್ಡಾಯವಾಗಿ ಪಿಎಫ್‌ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಲಿದೆ. ಸದ್ಯಕ್ಕೆ 10,000 ನೌಕರರಿಗೆ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಜೂನ್‌ 21ರಂದು ವಿಶ್ವ ಸಂಸ್ಥೆ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನೂ ನಡೆಸಲಿದೆ.

ಈ ಸಭೆಯಲ್ಲಿ ತಳಮಟ್ಟದ ಅಸಂಘಟಿತ ಕಾರ್ಮಿಕರಿಗೂ ವಿಶ್ವಾದ್ಯಂತ ಉದ್ಯೋಗ ಅವಕಾಶ ದೊರಕಿಸಲು ಪ್ರತ್ಯೇಕ ಮಂಡಳಿಯನ್ನೇ ರಚಿಸಬೇ ಕೆಂದು ಶಿಫಾರಸು ಮಾಡುವ ಸಾಧ್ಯತೆಯೂ ಇದೆ. ಏಕೆಂದರೆ, ಇದೇ ಮಾದರಿಯ ಮಂಡಳಿಗಳು ಜಾರ್ಖಂಡ್‌, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಸ್ಥಾಪನೆಯಾಗಿವೆ. ಅದೇ ಮಾದರಿಯಲ್ಲೇ ಇಲ್ಲಿಯೂ ಅಸ್ತಿತ್ವಕ್ಕೆ ಬರಬೇಕಿದೆ ಎನ್ನುವ ಒತ್ತಾಯವೂ ಇದೆ.

Follow Us:
Download App:
  • android
  • ios