ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರ್ಕಾರದಿಂದ ಜೂನ್‌ 27ರಂದು ಬೆಳಗ್ಗೆ 11ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆಚರಿಸಲು ಗುರುವಾರ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಸಚಿವ ಶಿವಕುಮಾರ್, ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸಂಘ-ಸಂಸ್ಥೆಗಳ ನೆರವು ಅಗತ್ಯ. ಜಯಂತಿ ಅಂಗವಾಗಿ ಬೆಂಗಳೂರು, ಮಾಗಡಿ ಮತ್ತು ಆವತಿಗಳಿಂದ ಜ್ಯೋತಿ ತರುವುದು, ಪುಸ್ತಕ ಬಿಡುಗಡೆ, ವಸ್ತು ಪ್ರದರ್ಶನ, ಉಪನ್ಯಾಸ, ಕಲಾ ಪ್ರದರ್ಶನ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಕೆಂಪೇಗೌಡರ ಇತಿಹಾಸವನ್ನು ನಾಡಿಗೆ ಸಾರುವ ಕಾರ್ಯಕ್ರಮವಾಗಿ ಜಯಂತಿ ಆಚರಿಸಲಾಗುತ್ತಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರ ಬಳಕೆ ಕುರಿತಂತೆ ಸಚಿವ ಶಿವಕುಮಾರ್ ಅವರು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಕೆಂಪೇಗೌಡರ ಕುರಿತು ಹತ್ತು ಹಲವು ಪುಸ್ತಕಗಳಿದ್ದರೂ ಅವುಗಳನ್ನು ಪರಾಮರ್ಶಿಸಿ ಹೊಸ ಪುಸ್ತಕವೊಂದನ್ನು ಹೊರತರುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಬೆಟ್ಟೇಗೌಡ, ಮಂಜೇಗೌಡ, ಕಾಳೇಗೌಡ, ರಾಮಚಂದ್ರ, ಅ. ದೇವೇಗೌಡ ಭಾಗವಹಿಸಿದ್ದರು.
