ಪ್ಯಾನ್ ಕಾರ್ಡ್ ಬಳಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಲು ಮುಂದಾಗಿರುವುದು ಕಾಳಧನಿಕರಿಗೆ ಕಬ್ಬಿಣದ ಕಡಲೆಯಾಗಿರುವುದಂತೂ ಅಕ್ಷರಶಃ ಸತ್ಯ.
ನವದೆಹಲಿ(ನ. 19): 500 ಮತ್ತು 1000 ರೂ ಮುಖಬೆಲೆಯ ನೋಟನ್ನು ಅಪನಗದೀಕರಣ ಮಾಡುವ ಮೂಲಕ ದೇಶದಾದ್ಯಂತ ಕಾಳಧನಿಕರ ನಿದ್ರೆ ಕೆಡವಿದ್ದ ಕೇಂದ್ರ ಸರ್ಕಾರ, ಕಪ್ಪು ಹಣದ ವಹಿವಾಟಿನ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ದಿಟ್ಟ ಹೆಜ್ಜೆಯನ್ನಿಟಿದೆ. ಮೊದಲಿಗೆ ಹಣ ವಹಿವಾಟಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ, ಇದೀಗ 50 ಸಾವಿರ ವಹಿವಾಟಿಗೆ ಕಡ್ಡಾಯವಾಗಿದ್ದ ಪ್ಯಾನ್ ಕಾರ್ಡ್ ಬಳಕೆಯನ್ನು 30 ಸಾವಿರಕ್ಕೆ ನಿಗದಿ ಮಾಡುವ ಸೂಚನೆಯನ್ನು ನೀಡಿದೆ.
ಒಂದೆಡೆ ನೋಟ್ ಬ್ಯಾನ್'ನಿಂದ ಆಗಿರುವ ಹಣದ ಅಭಾವ ನಿಧಾನವಾಗಿ ಸುಸ್ತಿಗೆ ಬರುತ್ತಿದೆ. ಮತ್ತೊಂದೆಡೆ ನೋಟ್ ಬ್ಯಾನ್ ಬಗ್ಗೆ ಇನ್ನೂ ಕೆಲವೆಡೆ ವಿರೋಧಗಳು ವ್ಯಕ್ತವಾಗುತ್ತಲೆ ಇವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಮುಂದಿನ ವಾರಕ್ಕೆ ನಿಗದಿಯಾಗಿರುವ ಕೇಂದ್ರ ಬಜೆಟ್'ನಲ್ಲಿ ಪ್ಯಾನ್'ಕಾರ್ಡ್ ಬಳಕೆಯ ಮಿತಿಯನ್ನು ಕಡಿತಗೊಳಿಸುವ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಕಾಳಧನಿಕರ ಮೇಲೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.
ತಿರುಪತಿಯಲ್ಲಿ ಕ್ಯಾಷ್'ಲೆಸ್?
ಚಿಲ್ಲರೆ ಸಮಸ್ಯೆಯಿಂದ ಡಿಜಿಟಲ್ ಸೇವೆಗೆ ಮುಂದಾಗಿದ್ದ ಗ್ರಾಹಕರಿಗೆ ಟಿಟಿಡಿ ಒಂದು ಸೌಲಭ್ಯವನ್ನು ಒದಗಿಸಿದೆ. ಒಂದೆಡೆ ದೇಶದಲ್ಲಿ ಕ್ಯಾಷ್'ಲೆಸ್ ವಹಿವಾಟಿಗೆ ಚಿಂತನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕಪ್ಪು ಹಣವನ್ನು ದೇಗುಲದ ಹುಂಡಿಗೆ ಅರ್ಪಿಸುತ್ತಿದ್ದು ಕೆಲ ದಿನಗಳಿಂದ ಭಾರಿ ಸದ್ದು ಮಾಡಿತ್ತು. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ದೇಗುಲಕ್ಕೆ ಕಾಣಿಕೆ ನೀಡುವವರು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಸುವಂತೆ ಟಿಟಿಡಿ ನಿಯಮ ಜಾರಿಗೊಳಿಸಿ ಕ್ಯಾಷ್ ಲೆಸ್ ವಹಿವಾಟಿನ ಮೊರೆ ಹೋಗಿದೆ.
ಒಟ್ಟಾರೆಯಾಗಿ, ಮೊದಲಿಗೆ ನೋಟ್ ಬ್ಯಾನ್ ಅಸ್ತ್ರ ಪ್ರಯೋಗಿಸಿದ್ದ ಕೇಂದ್ರ ಸರ್ಕಾರ, ಈಗ ಕ್ಯಾಷ್ ಲೆಸ್ ವಹಿವಾಟನ್ನು ಗಮನದಲ್ಲಿರಿಸಿಕೊಂಡು ಪ್ಯಾನ್ ಕಾರ್ಡ್ ಬಳಕೆಯನ್ನು ಖಡ್ಡಾಯಗೊಳಿಸಲು ಮುಂದಾಗಿರುವುದು ಕಾಳಧನಿಕರಿಗೆ ಕಬ್ಬಿಣದ ಕಡಲೆಯಾಗಿರುವುದಂತೂ ಅಕ್ಷರಶಃ ಸತ್ಯ.
- ಗೌತಮ್ ಚಿಕ್ಕನಂಜಯ್ಯ, ನ್ಯೂಸ್ ಡೆಸ್ಕ್ ಸುವರ್ಣ ನ್ಯೂಸ್
