Asianet Suvarna News Asianet Suvarna News

ಸರ್ಕಾರದಿಂದ ಪಬ್ಲಿಕ್ ಶಾಲೆ ಆರಂಭಕ್ಕೆ ಚಿಂತನೆ

ಕೇರಳ ರೀತಿ ಆರ್‌ಟಿಇ ಕಾಯ್ದೆಗೂ ಸುಧಾರಣೆ ತರಲು ಅಧ್ಯಯನ: ಸಚಿವ ತನ್ವೀರ್ ಸೇಠ್

Govt Schools To Be Named As Public Schools

ವಿಧಾನ ಪರಿಷತ್: ರಾಜ್ಯದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ‘ಕರ್ನಾಟಕ ಪಬ್ಲಿಕ್ ಶಾಲೆ’ ಹೆಸರಲ್ಲಿ ಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸಿರುವ ಜತೆಗೆ ಕೇರಳ ಮಾದರಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್’ಟಿಇ)ಗೆ ಸುಧಾರಣೆ ಮಾಡುವ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ನಿಯಮ 330ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಪ್ರತಿ ಹೋಬಳಿಯಲ್ಲಿ ಒಂದನೇ ತರಗತಿಯಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುವಂತಹ ವ್ಯವಸ್ಥೆ ಜಾರಿ ಮಾಡುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಆಂಗ್ಲ ಶಾಲೆಗಳು ಇಡುವಂತೆ ಸರ್ಕಾರಿ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಎಂದು ಹೆಸರಿಡುವ ಚಿಂತನೆ ಇದೆ. ಹೋಬಳಿ ಮಟ್ಟದಲ್ಲಿಯೂ ಈ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಮಾತೃಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇರಳದ ಮಾದರಿಯಲ್ಲಿಯೇ ಆರ್‌ಟಿಇ ಸುಧಾರಣೆ ಮಾಡಲಾಗುವುದು. ಇದಕ್ಕಾಗಿ ಇಲಾಖೆ ಅಧಿಕಾರಿಗಳು ಅಧ್ಯಯನ ನಡೆಸಲಿದ್ದಾರೆ.

ಕೇರಳದಲ್ಲಿ ಆರ್‌ಟಿಇ ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ಮೊದಲು ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಲಿದ್ದು, ನಂತರ ಅನುದಾನಿತ ಶಾಲೆಗಳಿಗೆ ಹಾಗೂ ಖಾಸಗಿ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಅಲ್ಲದೇ, ಆರ್’ಟಿಇ ಅರ್ಜಿಗಳ ಸಲ್ಲಿಕೆ ಪ್ರಕ್ರಿಯೆ ಕಾರ್ಯವು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಇದರಿಂದ ಪೋಷಕರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಾರೆ. ಹೀಗಾಗಿ ಮುಂದಿನ ದಿನದಲ್ಲಿ ಡಿಸೆಂಬರ್ ತಿಂಗಳಿಂದ ಈ ಪ್ರಕ್ರಿಯೆ ನಡೆಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿ ಕೆ.ಸಿ.ಕೊಂಡಯ್ಯ, ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರವೇ ಮುಂದಾಗದಿದ್ದರೆ ಸರ್ಕಾರಿ ಶಾಲೆಗಳನ್ನು ನಾವೇ ಕೊಲೆ ಮಾಡಿದಂತಾಗುತ್ತದೆ. ಆರ್‌ಟಿಇ ದುರುಪಯೋಗವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆರ್‌ಟಿಇಯಡಿ ಶಾಲೆಗಳಿಗೆ ದಾಖಲಿಸಲು ಇಚ್ಛಿಸುತ್ತಿದ್ದಾರೆ.

ಇದರಿಂದ ಕನ್ನಡ ಮಾಧ್ಯಮ ಶಾಲೆಗಳತ್ತ ಮಕ್ಕಳು ವಿಮುಖರಾಗುತ್ತಿದ್ದಾರೆ ಎಂದು ಹೇಳಿದರು. ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಮಾತನಾಡಿ, ಆರ್‌ಟಿಇ ಬಗ್ಗೆ ಸರ್ಕಾರವೇ ತಪ್ಪು ಮಾಹಿತಿಯನ್ನು ರವಾನಿಸುತ್ತಿದೆ. ಆರ್‌ಟಿಇ ಎಂದರೆ ಕೇವಲ ಇಂಗ್ಲೀಷ್ ಮಾಧ್ಯಮ ಹೋಗುವುದಲ್ಲ. ಕಡ್ಡಾಯವಾಗಿ ಶಿಕ್ಷಣ ನೀಡುವುದು. ಆದರೆ, ಬಹುತೇಕರು ಇಂಗ್ಲಿಷ್ ಶಾಲೆಗಳಿಗೆ ಸೇರ್ಪಡಿಸುವುದು ಎಂಬ ಭಾವನೆ ಇದೆ ಎಂದರು.

ಸದಸ್ಯರಾದ ಪುಟ್ಟಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ರಮೇಶ್ ಬಾಬು, ಶರಣಪ್ಪ ಮಟ್ಟೂರು ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios