ಕೆಳ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಒಮ್ಮೆಲೆ ದೇಶಾದ್ಯಂತ 6000 ನ್ಯಾಯಾಧೀಶರ ನೇಮಕಕ್ಕೆಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 

ನವದೆಹಲಿ: ನ್ಯಾಯಾಧೀಶರ ಕೊರತೆಯಿಂದಾಗಿ ಕೆಳಹಂತದ ಕೋರ್ಟುಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 2.8 ಕೋಟಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಸುಗಳ ವಿಲೇವಾರಿಗೆ ಕೇಂದ್ರ ಸರ್ಕಾರ ಮದ್ದು ಹುಡುಕಲು ಆರಂಭಿಸಿದೆ. ಕೆಳ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಒಮ್ಮೆಲೆ ದೇಶಾದ್ಯಂತ 6000 ನ್ಯಾಯಾಧೀಶರ ನೇಮಕಕ್ಕೆ ಚಿಂತನೆ ನಡೆಸಿದೆ. ಈ ಸಂಬಂಧ ಸುಪ್ರೀಂಕೋರ್ಟಿನ ಜತೆ ಸರ್ಕಾರ ಕಾರ್ಯೋನ್ಮುಖವಾಗಿದೆ. ಸದ್ಯ ಕೆಳ ಕೋರ್ಟುಗಳಲ್ಲಿ 5400 ಜಡ್ಜ್‌ ಹುದ್ದೆಗಳು ಖಾಲಿ ಇದ್ದು, ಅದಕ್ಕಿಂತ ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ.

ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳು ಹಾಗೂ ಹೈಕೋರ್ಟಿನ ಬಳಿ ಇದೆ. ನ್ಯಾಯಾಧೀಶರ ಕೊರತೆ ಹೋಗಲಾಡಿಸಲು ಅಖಿಲ ಭಾರತ ಮಟ್ಟದ ನ್ಯಾಯಾಂಗ ನೇಮಕಾತಿ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಪತ್ರ ಬರೆದಿತ್ತು. ಇದಕ್ಕೆ ರಾಜ್ಯ ಸರ್ಕಾರಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರದ ಪತ್ರವನ್ನೇ ರಿಟ್‌ ಅರ್ಜಿಯನ್ನಾಗಿ ಪರಿವರ್ತಿಸಿ ವಿಚಾರಣೆ ಆರಂಭಿಸಿದೆ. ಈ ವೇಳೆ ನೀಡುವ ನಿರ್ದೇಶನ ಆಧರಿಸಿ ನ್ಯಾಯಾಧೀಶರ ನೇಮಕ ಆರಂಭಿಸಲು ಸರ್ಕಾರ ಉದ್ದೇಶಿಸಿದೆ.

ಬಾಕಿ ಪ್ರಕರಣಗಳ ವಿಲೇವಾರಿ ಸಂಬಂಧ ಖಾಲಿ ಉಳಿದಿರುವ ಕೆಳಹಂತದ ಕೋರ್ಟುಗಳ ನ್ಯಾಯಾಧೀಶರ ಹುದ್ದೆಯನ್ನು ತಕ್ಷಣವೇ ಭರ್ತಿ ಮಾಡುವ ಇಚ್ಛೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವ್ಯಕ್ತಪಡಿಸಿರುವುದು ಕೇಂದ್ರ ಸರ್ಕಾರಕ್ಕೆ ವರವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್‌ ಹಸಿರು ನಿಶಾನೆ ತೋರಿದರೆ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಥವಾ ಇನ್ನಿತರೆ ಕೇಂದ್ರೀಯ ಸಂಸ್ಥೆಯ ಮೂಲಕ ಜಿಲ್ಲಾ ನ್ಯಾಯಾಧೀಶರು ಹಾಗೂ ಅಧೀನ ಕೋರ್ಟ್‌ ನ್ಯಾಯಾಧೀಶರ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆ ಆಯೋಜಿಸಲಾಗುತ್ತದೆ. ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಸಿಬಿಎಸ್‌ಇ ನಡೆಸುವ ನೀಟ್‌ ಮಾದರಿಯಲ್ಲಿ ಸ್ಥಳೀಯ ಭಾಷೆಗಳಿಗೆ ಮಹತ್ವ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.