ಹೊಂದಿರುವ ಬಂದೂಕಿನಿಂದಲೇ ಗುಂಡು ಹೊಡೆಯಬೇಕು. ಸತ್ತ/ ಗಾಯಗೊಂಡ ಹಂದಿಯನ್ನು 24 ತಾಸಿನಲ್ಲಿ ಅರಣ್ಯ ಇಲಾಖೆಗೆ ನೀಡಬೇಕು ತಿನ್ನುವಂತಿಲ್ಲ; ಸುಡಬೇಕು ಅಥವಾ ಹೂಳಬೇಕು. ಹಾಲೂಡಿಸುವ ಹಂದಿ ಕೊಲ್ಲುವಂತಿಲ್ಲ ಆದೇಶ ದುರ್ಬಳಕೆ ಸಾಧ್ಯತೆ: ಪರಿಸರ, ವನ್ಯಜೀವಿ ಪ್ರೇಮಿಗಳಿಂದ ವಿರೋಧ

‌- ಶಿವಕುಮಾರ್‌ ಮೆಣಸಿನಕಾಯಿ, ಬೆಂಗಳೂರು

ವನ್ಯಜೀವಿ ಪಟ್ಟಿಯಲ್ಲಿರುವ ಕಾಡು ಹಂದಿಗಳನ್ನು ಬೇಟೆಯಾಡಲು ಅವಕಾಶ ನೀಡುವ ವಿವಾದಾತ್ಮಕ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಪರಿಣಾಮ- ಇನ್ನು ಮುಂದೆ ನಾಡಿಗೆ ನುಗ್ಗಿದವು, ತೋಟ, ಬೆಳೆಗಳಿಗೆ ಹಾನಿ ಉಂಟುಮಾಡಿದವು ಎಂಬ ಕಾರಣ ನೀಡಿ ಕರ್ನಾಟಕದಲ್ಲಿ ಕಾಡು ಹಂದಿ ಬೇಟೆಯಾಡಬಹುದು! 
ಈ ಕುರಿತಂತೆ ರಾಜ್ಯ ಸರ್ಕಾರ ಜನವರಿ 19ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಆದರೆ, ಕಾಡು ಹಂದಿ ಬೇಟೆಗೆ ಕೆಲ ಷರತ್ತುಗಳನ್ನು ವಿಧಿಸಿದೆ. ಅದರ ಪ್ರಕಾರ ಬೆಳೆಗೆ ಹಾಗೂ ಜೀವಕ್ಕೆ ಹಾನಿ ಮಾಡುವ ಕಾಡು ಹಂದಿಯನ್ನು ಬೇಟೆಯಾಡಬಹುದಾದರೂ ಅದನ್ನು ಮಾಂಸಕ್ಕಾಗಿ ಬಳಸುವಂತಿಲ್ಲ. ಕೊಂದ ಹಂದಿಯನ್ನು 24 ಗಂಟೆಯೊಳಗೆ ಅರಣ್ಯ ಇಲಾಖೆಯ ವಶಕ್ಕೆ ನೀಡಬೇಕು. ಆದರೆ, ಇಂತಹ ನಿಯಮಾವಳಿ ದುರುಪಯೋಗವಾಗುವ ಸಾಧ್ಯತೆಯೇ ಹೆಚ್ಚಿದ್ದು, ಇದುವರೆಗೂ ಸುರಕ್ಷಿತ ವನ್ಯಜೀವಿ ಎನಿಸಿದ್ದ ಕಾಡು ಹಂದಿಯು ಮಾಂಸಾಹಾರಿಗಳ ಜಿಹ್ವಾದಾಹಕ್ಕೆ ಬಲಿಯಾಗುವ ಆತಂಕವಿದೆ ಎಂದು ವನ್ಯಜೀವಿ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ದಶಕಗಳಿಂದ ಕಾಡಿನಂಚಿನಲ್ಲಿರುವ ಜಿಲ್ಲೆಗಳಲ್ಲಿ ಕಾಡು ಹಂದಿಗಳಿಂದ ನಿರಂತರವಾಗಿ ಮನುಷ್ಯರು ಹಾಗೂ ಬೆಳೆಗಳ ಮೇಲೆ ದಾಳಿ ನಡೆಯುತ್ತಿದೆ. ಅದರಿಂದ ವಾರ್ಷಿಕ ಸರಾಸರಿ 12 ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ವರದಿ ಸರ್ಕಾರದ ಬಳಿ ಇತ್ತು. ಕಾಡು ಹಂದಿಗಳಿಂದ ಬೇಸತ್ತ ಜನರು ಅಕ್ರಮವಾಗಿ ಕಾಡುಹಂದಿಗಳನ್ನು ಕೊಲ್ಲುತ್ತಿದ್ದರು. ಅಧಿಕೃತವಾಗಿ ಕಾಡುಹಂದಿ ಕೊಲ್ಲಲು ಕಾನೂನು ಪ್ರಕಾರ ಅವಕಾಶ ನೀಡಬೇಕು ಎಂಬ ಕೂಗು ಇತ್ತು. ವಿಧಾನಮಂಡಲದಲ್ಲಿ ಮಾತ್ರವಲ್ಲದೇ, ಲೋಕಸಭೆಯಲ್ಲೂ ಈ ಬಗ್ಗೆ ಹಲವು ಬಾರಿ ಚರ್ಚೆಯಾಗಿತ್ತು. ಹೀಗಾಗಿ ಸರ್ಕಾರ ಇದೀಗ ಕಾಡುಹಂದಿ ಕೊಲ್ಲಲು ಕಾನೂನು ಚೌಕಟ್ಟಿನಲ್ಲಿ ಅವಕಾಶ ನೀಡಿದೆ. 
ಯಾವ ಆಧಾರದಲ್ಲಿ ಕಾನೂನು ತಿದ್ದುಪಡಿ?

ಕಾಡು ಹಂದಿ ದಾಳಿಯಿಂದ ಬೆಳೆ ಹಾನಿಯಷ್ಟೇ ಅಲ್ಲದೆ ಜೀವಹಾನಿಯೂ ಉಂಟಾಗುತ್ತಿದೆ. ವಾರ್ಷಿಕ ಸರಾಸರಿ 12 ಮಂದಿ ಕಾಡು ಹಂದಿ ದಾಳಿಯಿಂದಾಗಿ ಅಸು ನೀಗುತ್ತಿದ್ದಾರೆ ಎಂಬ ವರದಿ ಆಧಾರದ ಮೇಲೆ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇಂತಹದ್ದೊಂದು ಆದೇಶವನ್ನು ನೀಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಧ್ಯಾಯ ಮೂರನ್ನು ಬಳಸಿಕೊಂಡಿದೆ. ಈ ಅಧ್ಯಾಯದ ಸೆಕ್ಷನ್‌ 11 (ಬಿ) ಪ್ರಕಾರ ಯಾವುದೇ ವನ್ಯಪ್ರಾಣಿಯು ಮನುಷ್ಯನ ಪ್ರಾಣಕ್ಕೆ ಅಥವಾ ಆಸ್ತಿ-ಪಾಸ್ತಿಗೆ ಅಪಾಯಕಾರಿಯಾಗಿದೆ ಎಂಬುದು ಮನದಟ್ಟಾದರೆ ಅಂತಹ ಪ್ರದೇಶದಲ್ಲಿ ಬೇಟೆಯಾಲು ಅನುಮತಿ ನೀಡಬಹುದಾಗಿದೆ. ಈ ಕಾಯ್ದೆಯಡಿ ಕಾಡು ಹಂದಿ ಬೇಟೆಗೆ ಅವಕಾಶ ನೀಡುವ ಕುರಿತು ಕಳೆದ ಒಂದು ದಶಕದಿಂದ ಸರ್ಕಾರದ ಮಟ್ಟದಲ್ಲಿ ಸತತ ಚರ್ಚೆ ನಡೆಯುತ್ತಿತ್ತು. ಕಳೆದ ವರ್ಷ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ವಿಪರೀತ ಆದಾಗ ಆ ಜಿಲ್ಲೆಗೆ ಸೀಮಿತಗೊಳಿಸಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಬೇರೆ ಜಿಲ್ಲೆಗಳಲ್ಲೂ ಕಾಡುಹಂದಿಗಳ ಹಾವಳಿ ಮಿತಿ ಮೀರಿದೆ ಎಂದು ಭಾವಿಸಿರುವ ಸರ್ಕಾರ ಇದೀಗ ಗುಂಡಿಕ್ಕಲು ರಾಜ್ಯಾದ್ಯಂತ ಪರವಾನಗಿ ನೀಡಿದೆ.

ಆದೇಶದಲ್ಲಿ ಏನಿದೆ?

ಬೆಳೆಗೆ ಹಾನಿ ಮಾಡುವ ಕಾಡು ಹಂದಿಗಳನ್ನು ಜಮೀನುಗಳ ಮಾಲೀಕರು ಬೆಳೆ ಬೆಳೆದಿರುವ ಪ್ರದೇಶದ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವ ಬಂದೂಕಿನಿಂದ ಗುಂಡಿಕ್ಕಿ ಕೊಲ್ಲಬಹುದು. ಗುಂಡಿಕ್ಕಿದ ಬಳಿಕ 24 ಗಂಟೆ ಒಳಗಾಗಿ ಶವ ಅಥವಾ ಗಾಯಗೊಂಡ ಕಾಡು ಹಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಬೇಕು. ತಿನ್ನಲು ಅಥವಾ ಇನ್ನಾವುದೇ ಉದ್ದೇಶಕ್ಕೆ ಬಳಸಬಾರದು. ಅರಣ್ಯ ಇಲಾಖೆಯಿಂದಲೇ ಹೂಳಬೇಕು. ಮಾನವ ಅತಿಕ್ರಮಣ ಮಾಡಿರುವ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಕೊಲ್ಲುವಂತಿಲ್ಲ. ಹಾಲೂಡಿಸುವ ಕಾಡುಹಂದಿಯನ್ನು ಕೊಲ್ಲುವಂತಿಲ್ಲ. ಕಾರ್ಯಾಚರಣೆ ವೇಳೆ ಕಾಡುಹಂದಿ ತಪ್ಪಿಸಿಕೊಂಡರೆ ಅದನ್ನು ಬೆನ್ನಟ್ಟಿಕೊಲ್ಲುವಂತಿಲ್ಲ ಎಂಬ ನಿರ್ಬಂಧವನ್ನೂ ಹೇರಲಾಗಿದೆ.

(ಕನ್ನಡಪ್ರಭ ವಾರ್ತೆ)