ಬೆಂಗಳೂರು(ಸೆ. 21): ಕಾವೇರಿ ವಿಚಾರವಾಗಿ ಇಂದು ರಾತ್ರಿ ರಾಜ್ಯ ಸರಕಾರದಿಂದ ಒಂದು ಗಟ್ಟಿ ನಿರ್ಧಾರ ಬರಬಹುದೆಂಬ ಸುಳಿವು ಸಿಕ್ಕಿದೆ. ಇಂದು ಬೆಳಗ್ಗೆ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಎಲ್ಲ ಸಚಿವರೂ ಕಾವೇರಿ ನೀರು ಬಿಡಬಾರದು ಎಂದು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಅನುಷ್ಠಾನಗೊಳ್ಳಲು ಅಸಾಧ್ಯವಾದ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ನ್ಯಾಯಾಂಗ ಉಲ್ಲಂಘನೆ ಎನಿಸುವುದಿಲ್ಲ. ಹೀಗಾಗಿ, ತಮಿಳುನಾಡಿಗೆ ನಾವು ನೀರು ಬಿಡಬಾರದು ಎಂಬ ಅಭಿಪ್ರಾಯವನ್ನು ಹಿರಿಯ ಸಚಿವರಾದ ರಮೇಶ್ ಕುಮಾರ್, ಹೆಚ್.ಕೆ.ಪಾಟೀಲ್ ಮತ್ತು ಟಿಬಿ ಜಯಚಂದ್ರ ಮೊದಲಿಗೆ ವ್ಯಕ್ತಪಡಿಸಿದರು. ಸಭೆಯಲ್ಲಿದ್ದವರೆಲ್ಲರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಇದಾದ ಬಳಿಕ ಸಿಎಂ ಸಿದ್ದರಾಮಯ್ಯನವರು ರಾತ್ರಿ 8ಗಂಟೆಗೆ ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಇದಕ್ಕೆ ಮುನ್ನ ಮಂತ್ರಿ ಪರಿಷತ್ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕಾಂಗ್ರೆಸ್ ಹೈಕಮಾಂಡ್'ನ ಮುಂದಿಡಲಾಗುತ್ತದೆ. ಜೊತೆಗೆ, ಕರ್ನಾಟಕದ ವಕೀಲರ ತಂಡದೊಂದಿಗೆ ಸಾಧಕ-ಬಾಧಕಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಆ ನಂತರ ಸಿಎಂ ಅವರು ವಿಪಕ್ಷ ನಾಯಕರ ಸಭೆ ನಡೆಸುತ್ತಾರೆ. ಕಾಂಗ್ರೆಸ್ ಹೈಕಮಾಂಡ್, ವಕೀಲರು ಹಾಗೂ ವಿಪಕ್ಷ ನಾಯಕರು ನೀಡುವ ಸಲಹೆಗಳನ್ನಾಧರಿಸಿ ರಾತ್ರಿ 8ಗಂಟೆಯ ವಿಶೇಷ ಸಂಪುಟ ಸಭೆಯಲ್ಲಿ ಕಾವೇರಿ ವಿಚಾರವಾಗಿ ಒಂದು ಅಂತಿಮ ನಿರ್ಧಾರಕ್ಕೆ ಸರಕಾರ ಬರಲಿದೆ ಎಂದು ಹೇಳುತ್ತಿವೆ ಮೂಲಗಳು.