ಬೆಂಗಳೂರು :   ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೆ ಶನಿವಾರ ರಜೆ ನೀಡುವುದಕ್ಕೆ ಬದಲಾಗಿ ವಿವಿಧ ಮಹನೀಯರ ಜಯಂತಿ ಮತ್ತು ಧಾರ್ಮಿಕ ಹಬ್ಬಕ್ಕೆ ನೀಡುವ ರಜೆ ರದ್ದುಪಡಿಸುವಂತೆ ಸಚಿವ ಸಂಪುಟ ಉಪ ಸಮಿತಿ ಮಾಡಿರುವ ಶಿಫಾರಸನ್ನು ಸಚಿವ ಸಂಪುಟ ಸದ್ಯಕ್ಕೆ ಮುಂದೂಡಿದೆ. ಬದಲಾಗಿ ಈ ಕುರಿತು ಸಮುದಾಯದ ಮುಖಂಡರು, ಸಂಘಟನೆಗಳು, ಆಡಳಿತ ಕ್ಷೇತ್ರದ ತಜ್ಞರ ಜೊತೆ ಚರ್ಚಿಸಿ ಅಗತ್ಯ ಮಾರ್ಪಾಡಿನೊಂದಿಗೆ ಶಿಫಾರಸು ಮರು ಮಂಡಿಸುವಂತೆ ಸಚಿವ ಸಂಪುಟ ಸೂಚಿಸಿದೆ.

ಪ್ರತೀ ತಿಂಗಳ 4 ನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ನೀಡಬೇಕೆಂಬ 6 ನೇ ವೇತನ ಆಯೋಗದ ವರದಿಯಲ್ಲಿನ  ಅಂಶವನ್ನು ಪರಾಮರ್ಶಿಸಿ ಸಂಪುಟ ಉಪ ಸಮಿತಿಯು ಸರ್ಕಾರದ ಸೂಚನೆಯಂತೆ ಶಿಫಾರಸುಗಳನ್ನು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತ್ತು.

ಈ ಶಿಫಾರಸಿನಲ್ಲಿ ಪ್ರಮುಖವಾಗಿ, ಸರ್ಕಾರಿ ನೌಕರರಿಗೆ  ಪ್ರಸ್ತುತ ಇರುವ 15 ಸಾಂದರ್ಭಿಕ ರಜೆಯನ್ನು,  12ಕ್ಕೆ ಕಡಿತಗೊಳಿಸುವಂತೆ ಹೇಳಿದೆ. ಅಲ್ಲದೆ, ಬಸವ ಜಯಂತಿ, ಕನಕ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಕಾರ್ಮಿಕ ದಿನ, ಗುಡ್ ಫ್ರೈಡೇ, ಮಹಾಲಯ ಅಮಾವಾಸ್ಯೆ ಮತ್ತು ಈದ್ ಮಿಲಾದ್ ಈ ಎಲ್ಲ ಜಯಂತಿಗಳು ಮತ್ತು ಹಬ್ಬಗಳಂದು ಸರ್ಕಾರಿ ನೌಕರರಿಗೆ ಇರುವ ರಜೆಯನ್ನು ರದ್ದುಪಡಿಸಿ ಕೆಲಸದ ದಿನಗಳಾಗಿ ಪರಿವರ್ತಿಸುವಂತೆ ತಿಳಿಸಿದೆ. 

ರಜೆ ದಿನಗಳನ್ನು ನಿರ್ಬಂಧಿತ ರಜೆ ಎಂದು ಘೋಷಿಸಬೇಕು. ದೀಪಾವಳಿ ಹಬ್ಬದ ನಿಮಿತ್ತ ನೀಡುವ ರಜೆಗಳನ್ನು ಹಬ್ಬದ ಮೊದಲ ಮತ್ತು 3ನೇ ದಿನ ನೀಡುವ ಬದಲು ಮೊದಲ ಮತ್ತು 2 ನೇ ದಿನ ನೀಡುವಂತೆ ಕಾನೂನು-ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪ ಸಮಿತಿ ಶಿಫಾರಸುಗಳನ್ನು ಒಪ್ಪಿಗೆಗಾಗಿ ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತ್ತು. 

ಆದರೆ, ಸರ್ಕಾರ ಇದನ್ನು ಒಪ್ಪದೆ, ಸರ್ಕಾರಿ ನೌಕರರ ಸಂಘಟನೆ, ವಿವಿಧ ಸಮುದಾಯ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಮತ್ತೊಮ್ಮೆ ಸಮಾಲೋಚನೆ ನಡೆಸಿ ಸಲಹೆ ಪಡೆದು ಅದರಂತೆ ಹೊಸದಾಗಿ ಶಿಫಾರಸುಗಳನ್ನು ಮಾರ್ಪಡಿಸಿ ಮಂಡಿಸುವಂತೆ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.