ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ದಲಿತ ಮೀಸಲಾತಿ ನೀಡುವ ಸಂಬಂಧ ಸುಪ್ರಿಂಕೋರ್ಟ್ ಆದೇಶದ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆಗೆ  ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ್ದ ವಿವರಣೆಗಳನ್ನು ಸರ್ಕಾರ ಕಳುಹಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಬೆಂಗಳೂರು (ಆ.28):ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ದಲಿತ ಮೀಸಲಾತಿ ನೀಡುವ ಸಂಬಂಧ ಸುಪ್ರಿಂಕೋರ್ಟ್ ಆದೇಶದ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ್ದ ವಿವರಣೆಗಳನ್ನು ಸರ್ಕಾರ ಕಳುಹಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ರಾಜ್ಯಪಾಲರು ಸುಗ್ರಿವಾಜ್ಞೆಯ ಔಚಿತ್ಯವನ್ನು ಸಮರ್ಥಿಸಿಕೊಳ್ಳುವಂತೆ ಮಾಹಿತಿ ಕೋರಿದ್ದರು. ಆ ಕುರಿತು ಎಲ್ಲ ಮಾಹಿತಿಯನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಖುದ್ದಾಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ. ಇಂದು ಅಥವಾ ಮಂಗಳವಾರ ಭೇಟಿ ಮಾಡುತ್ತೇನೆ. ಸುಗ್ರೀವಾಜ್ಞೆ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಈ ಬಗ್ಗೆ ಸಂಪುಟದಲ್ಲೂ ಚರ್ಚೆ ನಡೆಯಿತು ಎಂದರು.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಶೇ.50 ರಷ್ಟು ಮೀಸಲಾತಿ ನೀಡುವ ವಿಚಾರಕ್ಕೂ ರಾಜ್ಯಪಾಲರು ವಿವರಣೆ ಕೋರಿದ್ದರು. ಈ ಮೀಸಲಾತಿಯನ್ನು ಯಾವ ಕಾಯ್ದೆಯ ಅಡಿಯಲ್ಲಿ ನೀಡಲಾಗಿದೆ ಎಂದು ಕೇಳಿದ್ದರು. ಸದ್ಯದ ದೇಶದ ವಿವಿ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಕಾಯ್ದೆಯಡಿಯಲ್ಲೇ ರಾಜ್ಯದಲ್ಲೂ ಸ್ಥಳೀಯರಿಗೆ ಮೀಸಲಾತಿ ಕಳುಹಿಸಲಾಗಿದೆ ಎಂಬ ವಿವರಣೆ ನೀಡಲಾಗಿದೆ. ಇನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು ಮೂರರಿಂದ ಐದಕ್ಕೆ ಹೆಚ್ಚಳ ಮಾಡಿರುವ ತಿದ್ದುಪಡಿ ಸಂಬಂಧವೂ ರಾಜ್ಯಪಾಲರು ವಿವರಣೆ ಕೋರಿದ್ದರು. ಈ ಸಂಬಂಧ ಕಾನೂನಾತ್ಮಕ ಅಂಶಗಳನ್ನು ಒಳಗೊಂಡು ರಾಜ್ಯಪಾಲರಿಗೆ ವಿವರಣೆ ನೀಡಲಾಗಿದೆ. ಈ ಮೂರು ವಿಷಯಗಳಿಗೆ ರಾಜ್ಯಪಾಲರು ಶೀಘ್ರ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಸಚಿವ ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.