Asianet Suvarna News Asianet Suvarna News

ಟ್ರಾಫಿಕ್‌ ಇರುತ್ತದೆ, 10 ಗಂಟೆಗೆ ಬರೋಕಾಗಲ್ಲ!

ಟ್ರಾಫಿಕ್‌ ಇರುತ್ತದೆ, 10 ಗಂಟೆಗೆ ಬರೋಕಾಗಲ್ಲ!  ಬೆಳಗ್ಗೆ 10.30ರೊಳಗೆ ಕೆಲಸಕ್ಕೆ ಬರಲು ಅವಕಾಶ ನೀಡಿ | ಸರ್ಕಾರಿ ನೌಕರರ ಸಂಘ ಮನವಿ

Govt employees organisation request to chief secretory to extend login time
Author
Bengaluru, First Published Aug 4, 2019, 8:37 AM IST

ಬೆಂಗಳೂರು (ಆ. 04): ಟ್ರಾಫಿಕ್‌ ಸಮಸ್ಯೆಯಿಂದಾಗಿ ಸರ್ಕಾರಿ ಕಚೇರಿಗಳಿಗೆ ಬೆಳಗ್ಗೆ 10 ಗಂಟೆಯಿಂದ 10.10ರೊಳಗಾಗಿ ಕೆಲಸಕ್ಕೆ ಹಾಜರಾಗಲು ಆಗುವುದಿಲ್ಲ. 10ರಿಂದ 10.30ರೊಳಗೆ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಬೇಕು ಎಂದು ಸರ್ಕಾರಿ ಸಚಿವಾಲಯ ನೌಕರರ ಸಂಘ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ಗುರುಸ್ವಾಮಿ ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಮನವಿ ಪತ್ರದಲ್ಲಿ, ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ಇರುತ್ತದೆ. ಅದರಿಂದಾಗಿ ನೌಕರರು 7.30 ಗಂಟೆ ಮಾಡಬೇಕಾಗುತ್ತದೆ. ಸಚಿವಾಲಯ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ನಗರದ ವಿವಿಧ ಭಾಗಗಳಲ್ಲಿ ಮೇಲ್ಸೇತುವೆ ಸೇರಿದಂತೆ ಹಲವಾರು ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹೀಗಾಗಿ ನಿಗದಿಪಡಿಸಿದ ವೇಳೆಗೆ ವಿಧಾನಸೌಧಕ್ಕೆ ಬರಲು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದು ಸವಾಲಿನ ಕೆಲಸವಾಗಿದೆ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರ ಆರೋಗ್ಯದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ನೌಕರರ ಹಾಜರಾತಿಯನ್ನು ದಾಖಲಿಸುವ ಬಯೋಮೆಟ್ರಿಕ್‌ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೇ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವೊಮ್ಮೆ ಬಯೋಮೆಟ್ರಿಕ್‌ ಯಂತ್ರಗಳು ಸ್ಥಗಿತಗೊಂಡಿರುವುದು ಅಥವಾ ಹಾಜರಾತಿ ದಾಖಲಿಸಿದರೂ ಅದು ದಾಖಲಾಗದೇ ಇರುವುದು ಕಂಡುಬರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ನೌಕರರು 10ರಿಂದ 10.30ರೊಳಗೆ ಕಚೇರಿಗೆ ಬರಲು ಅವಕಾಶ ಕಲ್ಪಿಸಬೇಕು. ಆ ಮೂಲಕ ಸರ್ಕಾರಿ ನೌಕರರು ಒತ್ತಡರಹಿತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

Follow Us:
Download App:
  • android
  • ios