ಬೆಂಗಳೂರು (ಸೆ. 02):  ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ 100 ದಿನಗಳ ಕಾಲ ನೀಡುತ್ತಿರುವ ಉದ್ಯೋಗವನ್ನು ಪ್ರವಾಹಪೀಡಿತ ಪ್ರದೇಶಗಳಲ್ಲಿ 150 ದಿನಕ್ಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ನರೇಗಾ ಯೋಜನೆಯಡಿ ಅರ್ಹರಿಗೆ 100 ದಿನ ಮಾತ್ರ ಉದ್ಯೋಗ ಕೊಡಲು ಅವಕಾಶವಿದೆ. ಪ್ರವಾಹದಿಂದ ತೊಂದರೆಯಲ್ಲಿರುವ ಜನರಿಗೆ ಹೆಚ್ಚಿನ ದಿನಗಳ ಉದ್ಯೋಗ ನೀಡಬೇಕಾದರೆ ಕೇಂದ್ರ ಸರ್ಕಾರ ಸಮ್ಮತಿ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ 22 ಪ್ರವಾಹಪೀಡಿತ ಜಿಲ್ಲೆಗಳ 103 ತಾಲೂಕುಗಳಿಗೆ ಮಾತ್ರ ಅನ್ವಯವಾಗುವಂತೆ ನಿಬಂಧನೆಯನ್ನು ಸಡಿಲಿಸುವಂತೆ ಶೀಘ್ರದಲ್ಲಿ ಮನವಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇತ್ತೀಚೆಗೆ ಪ್ರವಾಹಪೀಡಿತ ಪ್ರದೇಶಗಳ ಅಧ್ಯಯನಕ್ಕೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡದ ಮುಂದೆ ಈ ಮನವಿ ಇಡಲಾಗಿತ್ತು. ಆದಾಗ್ಯೂ ಕೇಂದ್ರಕ್ಕೂ ಸಹ ಮನವಿ ಮಾಡಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಕಾಮಗಾರಿ?:

ಈ ನಡುವೆ, ಪ್ರವಾಹಪೀಡಿತ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಆಯುಕ್ತರು ಸೂಚನೆ ಹೊರಡಿಸಿದ್ದಾರೆ.

ಪ್ರವಾಹದಿಂದ ಮೂಲಭೂತ ಸೌಕರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ರಸ್ತೆಗಳನ್ನು ಪುನರ್‌ ಸ್ಥಿತಿಗೆ ತರುವ ಕೆಲಸ, ವಿಪತ್ತು ನಿರ್ವಹಣಾ ಕಾಮಗಾರಿಗಳು, ಪ್ರವಾಹ ನಿಯಂತ್ರಣ ಸಂರಕ್ಷಣಾ ಕಾಮಗಾರಿಗಳು, ಜವಳು ಪ್ರದೇಶದಲ್ಲಿ ಚರಂಡಿಗಳ ನಿರ್ಮಾಣ, ಪ್ರವಾಹ ಕಾಲುವೆಗಳ ದುರಸ್ತಿ, ತೋಡುಗಳ ಜೀರ್ಣೋದ್ಧಾರ, ಕರಾವಳಿ ಪ್ರದೇಶಗಳ ಸಂರಕ್ಷಣೆಗಾಗಿ ನೀರಿನ ರಭಸದ ಚರಂಡಿಗಳ ನಿರ್ಮಾಣ, ಅಂಗನವಾಡಿ ಕಟ್ಟಡಗಳು, ಗ್ರಾಮ ಪಂಚಾಯಿತಿ ಭವನ, ಭಾರತ್‌ ನಿರ್ಮಾಣ ಸೇವಾ ಕೇಂದ್ರ, ಗೋದಾಮುಗಳು, ಬಾಂದಾರುಗಳು, ವಿತರಣಾ ಕಾಲುವೆಗಳು, ಸ್ಮಶಾನ, ಆಟದ ಮೈದಾನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನರೇಗಾ ಯೋಜನೆಯಡಿ ಮಾಡಿದ ಕಾಮಗಾರಿಗಳನ್ನು ಮಾತ್ರ ದುರಸ್ತಿ ಮತ್ತು ನಿರ್ವಹಣೆ ಕೈಗೆತ್ತಿಕೊಳ್ಳಬೇಕು, ಸಾಮೂಹಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಪ್ರವಾಹ ಪೀಡಿತ 22 ಜಿಲ್ಲೆಗಳ 103 ತಾಲ್ಲೂಕುಗಳಲ್ಲಿ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಈಗಿರುವ 100 ದಿನಗಳ ಉದ್ಯೋಗ ಮಿತಿಯನ್ನು 150 ದಿನಗಳಿಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಸಂಕಷ್ಟದಲ್ಲಿರುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

-ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ