Asianet Suvarna News Asianet Suvarna News

ಶಾಲೆ, ದೇಗುಲ, ಆಸ್ಪತ್ರೆ ಬಳಿ ಮೊಬೈಲ್‌ ಟವರ್‌ ನಿಷಿದ್ಧ

ಶಾಲೆ, ದೇಗುಲ, ಆಸ್ಪತ್ರೆ ಬಳಿ ಮೊಬೈಲ್‌ ಟವರ್‌ ನಿಷಿದ್ಧ |   50 ಮೀಟರ್‌ನೊಳಗೆ ಮೊಬೈಲ್‌ ಟವರ್‌ ಸ್ಥಾಪಿಸುವಂತಿಲ್ಲ |  ರಾಜ್ಯ ಸರ್ಕಾರದಿಂದ ನಿಯಮ ಜಾರಿ: ಸಚಿವ ಖಾದರ್‌ |  ಪಾರಂಪರಿಕ ಕಟ್ಟಡಗಳಿಂದ 100 ಮೀಟರ್‌ ದೂರದಲ್ಲಿ ಟವರ್‌

Govt bans mobile tower within 50 metres of schools hospitals religious buildings
Author
Bengaluru, First Published Jun 4, 2019, 9:20 AM IST

ಬೆಂಗಳೂರು (ಜೂ. 04): ರಾಜ್ಯದಲ್ಲಿ ಮೊಬೈಲ್‌ ಟವರ್‌ ಅಳವಡಿಕೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ನಿಯಮದ ಅನ್ವಯ ಹಾಲಿ ಅಳವಡಿಕೆಯಾಗಿರುವ ಟವರ್‌ ಹಾಗೂ ಹೊಸದಾಗಿ ಅಳವಡಿಕೆಯಾಗುವ ಟವರ್‌ಗಳಿಗೆ ಸರ್ಕಾರದಿಂದ ಅನುಮತಿ ಕಡ್ಡಾಯ.

ಜತೆಗೆ ಪಾರಂಪರಿಕ ಕಟ್ಟಡಗಳಿಂದ 100 ಮೀಟರ್‌, ಶಾಲಾ-ಕಾಲೇಜು, ಧಾರ್ಮಿಕ ಕಟ್ಟಡ ಹಾಗೂ ಆಸ್ಪತ್ರೆಗಳಿಂದ 50 ಮೀಟರ್‌ ಅಂತರದಲ್ಲಿ ಯಾವುದೇ ಟವರ್‌ ಅಳವಡಿಕೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯದಲ್ಲಿ ಅನಧಿಕೃತ ಮೊಬೈಲ್‌ ಟವರ್‌ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ಹಾಗೂ ಸಾಮರ್ಥ್ಯವಿಲ್ಲದ ಕಟ್ಟಡಗಳ ಮೇಲೆ ಅಳವಡಿಕೆ ಮಾಡುತ್ತಿರುವುದರಿಂದ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ.

ಹೀಗಾಗಿ ವ್ಯವಸ್ಥಿತವಾಗಿ ಟವರ್‌ಗಳ ಅಳವಡಿಕೆ ಮಾಡುವುದು ಹಾಗೂ ಎಲ್ಲಾ ಟವರ್‌ಗಳನ್ನು ಸರ್ಕಾರದ ಸಕ್ಷಮ ಪ್ರಾಧಿಕಾರಗಳ ಅಡಿಗೆ ತರುವ ಸಲುವಾಗಿ ನೂತನ ನಿಯಮಗಳನ್ನು ರೂಪಿಸಿ ಮೇ 29ರಂದೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಯು.ಟಿ. ಖಾದರ್‌ ಹೇಳಿದರು.

ಮೊಬೈಲ್‌ ಟವರ್‌ಗಳನ್ನು ವಸತಿ ಪ್ರದೇಶದಿಂದ ದೂರ ಅಳವಡಿಕೆ ಮಾಡಬೇಕು. ಒಂದು ವೇಳೆ ಸಾಧ್ಯವಿಲ್ಲದಿದ್ದರೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ವಾಣಿಜ್ಯ ಪ್ರದೇಶ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಕೆ ಮಾಡಬೇಕು. ಕಟ್ಟಡಗಳ ಮೇಲೆ ಅಳವಡಿಕೆ ಮಾಡಬೇಕಾದರೆ ದೃಢೀಕೃತ ಸ್ಟ್ರಕ್ಚರಲ್‌ ಇಂಜಿನಿಯರ್‌ ಬಳಿ ಕಟ್ಟಡದ ದೃಢೀಕರಣ ಪಡೆಯುವುದು ಕಡ್ಡಾಯ ಮಾಡಲಾಗಿದೆ ಎಂದರು.

ಟವರ್‌ ಅಳವಡಿಕೆಗೆ ಇವು ಕಡ್ಡಾಯ:

ಟವರ್‌ ಅಳವಡಿಕೆಗೆ ಅನುಮತಿಗೆ ಅರ್ಜಿ ಸಲ್ಲಿಸುವ ವೇಳೆ ಸ್ಥಳ ನಕ್ಷೆ, ನಿವೇಶನ ನಕ್ಷೆ, ಸ್ಟ್ರಕ್ಚರಲ್‌ ಸ್ಟೆಬಿಲಿಟಿ ಸರ್ಟಿಫಿಕೇಟ್‌, ಮಾಲಿಕತ್ವ ಅಥವಾ ಗುತ್ತಿಗೆ ದಾಖಲೆಗಳು, ಅಳವಡಿಕೆಯಾಗುವ ಟವರ್‌, ಫ್ರೀಕ್ವೆನ್ಸಿ, ತೂಕ (ಟನ್‌ಗಳಲ್ಲಿ) ಮಾಹಿತಿ ಒದಗಿಸಬೇಕು.

ಜತೆಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ, ಎಆರ್‌ಎಐನಿಂದ ವಿತರಿಸಿರುವ ದಾಖಲೆ ಪತ್ರ ಒದಗಿಸಬೇಕು. ಈಗಾಗಲೇ ಅಳವಡಿಕೆಯಾಗಿರುವ ಟವರ್‌ಗಳು ಇವೆಲ್ಲಾ ಮಾಹಿತಿಯೊಂದಿಗೆ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು.

ನಿರ್ಬಂಧಿತ ಸ್ಥಳಗಳು:

ಕೆರೆ, ಕಾಲುವೆ ಹಾಗೂ ರಾಜಕಾಲುವೆಗಳ ಜಾಗ ಹಾಗೂ ಬಫರ್‌ ವಲಯದಲ್ಲಿ ಮೊಬೈಲ್‌ ಟವರ್‌ ನಿರ್ಮಾಣ ಮಾಡುವಂತಿಲ್ಲ. ಕೆರೆಯ ಬಫರ್‌ ವಲಯದಿಂದ ಕನಿಷ್ಠ 6 ಮೀಟರ್‌ ಅಂತರದಲ್ಲಿ ಟವರ್‌ ನಿರ್ಮಿಸಬೇಕು.

ರೈಲ್ವೆ ಮಾರ್ಗ ಸೇರಿ ರೈಲ್ವೆ ಇಲಾಖೆ ಆಸ್ತಿಯಿಂದ 30 ಮೀಟರ್‌ ಅಂತರ ಇರಬೇಕು. ಹೈಟೆನ್ಷನ್‌ ವಿದ್ಯುತ್‌ ಮಾರ್ಗದಿಂದ ವಿದ್ಯುತ್‌ ಮಾರ್ಗದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಂತರ ಕಾಯ್ದುಕೊಳ್ಳಬೇಕು. ಉದಾ: 11 ಕೆವಿ ಮಾರ್ಗದಿಂದ 7 ಮೀಟರ್‌ ಅಂತರ, 400 ಕೆ.ವಿ. ಮಾರ್ಗದಿಂದ 52 ಮೀಟರ್‌ ಕಡ್ಡಾಯವಾಗಿ ದೂರ ಇರಬೇಕು.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಟವರ್‌ ಅಳವಡಿಕೆ ಮಾಡಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆಯಬೇಕು.

ಶಾಲೆ-ಆಸ್ಪತ್ರೆಯಿಂದ 50 ಮೀಟರ್‌ ದೂರ:

ಪಾರಂಪರಿಕ ಕಟ್ಟಡಗಳು, ಸ್ಮಾರಕಗಳಿಂದ ಕನಿಷ್ಠ 100 ಮೀಟರ್‌ ಅಂತರ ಇರಬೇಕು. ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಉಳಿದಂತೆ ಶಾಲೆ, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳ ಕಟ್ಟಡಗಳಿಂದ 50 ಮೀಟರ್‌ ಅಂತರ ಇರಬೇಕು.

ಇವುಗಳ ಸಂಬಂಧ ಸಾರ್ವಜನಿಕರು ದೂರುಗಳನ್ನು ನೀಡಲು ಅನುವಾಗುವಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಟೆಲಿಕಾಂ ಸಮಿತಿ ಹಾಗೂ ರಾಜ್ಯ ಮಟ್ಟದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಟೆಲಿಕಾಂ ಸಮಿತಿ ಕಾರ್ಯ ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.

 

* ಟವರ್‌ ಅಳವಡಿಕೆ ಶುಲ್ಕ: (ಒಂದು ಬಾರಿಯ ಶುಲ್ಕ)

ಬಿಬಿಎಂಪಿ ವ್ಯಾಪ್ತಿ    - 1 ಲಕ್ಷ ರು.

ಬಿಬಿಎಂಪಿ ಹೊರತುಪಡಿಸಿ ಇತರೆ ಪಾಲಿಕೆಗಳು - 50 ಸಾವಿರ ರು.

ನಗರ ಸಭೆ - 35 ಸಾವಿರ ರು.

ಪುರಸಭೆ - 25 ಸಾವಿರ ರು.

ಪಟ್ಟಣ ಪಂಚಾಯತಿ - 20 ಸಾವಿರ ರು.

ಗ್ರಾಮ ಪಂಚಾಯತಿ - 15 ಸಾವಿರ ರು.

Follow Us:
Download App:
  • android
  • ios