ಬೆಂಗಳೂರು [ಜು.07] :  ಆಡಳಿತಾರೂಢ ಪಕ್ಷಗಳ ಶಾಸಕರ ರಾಜೀನಾಮೆ ಪರ್ವ ಮುಂದುವರೆದಂತೆ ರಾಜ್ಯಪಾಲರ ಪಾತ್ರ ಮಹತ್ವದ್ದಾಗಿ ಪರಿಣಮಿಸಲಿದೆ.

ಶಾಸಕರ ರಾಜೀನಾಮೆ ಅಂಗೀಕಾರಗೊಳ್ಳದೆ ವಿಳಂಬವಾದಲ್ಲಿ ಅಥವಾ ಹೈಡ್ರಾಮಾಗಳು ನಡೆದಲ್ಲಿ ಆಗ ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡುವುದು ನಿಶ್ಚಿತ. ಶನಿವಾರ ರಾಜೀನಾಮೆ ನೀಡಿರುವ 12 ಶಾಸಕರು ಮತ್ತು ಹಿಂದೆ ನೀಡಿದ ಆನಂದ್‌ ಸಿಂಗ್‌ ಅವರ ರಾಜೀನಾಮೆ ಪತ್ರಗಳ ಬಗ್ಗೆ ಸ್ಪೀಕರ್‌ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಕಾದು ನೋಡಬಹುದು.

ಮಂಗಳವಾರ ತಾವು ಶಾಸಕರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸುವುದಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಹೇಳಿರುವುದರಿಂದ ಅಲ್ಲಿವರೆಗೆ ಕಾದು ನೋಡಬಹುದು. ಇದನ್ನು ಪ್ರತಿಪಕ್ಷ ಬಿಜೆಪಿ ಕೂಡ ಕಾದು ನೋಡುತ್ತಿದೆ. ಸ್ಪೀಕರ್‌ ಅವರು ರಾಜೀನಾಮೆ ಅಂಗೀಕರಿಸುವುದನ್ನು ವಿಳಂಬ ಮಾಡುವ ಸಾಧ್ಯತೆ ಕಂಡು ಬಂದಲ್ಲಿ ಸಹಜವಾಗಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರ ಮೊರೆ ಹೋಗುವ ಸಂಭವವಿದೆ.

ಹಾಗಾದಾಗ ರಾಜ್ಯಪಾಲರು ತಮ್ಮನ್ನೂ ಶಾಸಕರು ಭೇಟಿ ಮಾಡಿ ರಾಜೀನಾಮೆ ಪ್ರತಿಯನ್ನು ನೀಡಿರುವುದರಿಂದ ಈ ಕುರಿತು ಸ್ಪೀಕರ್‌ ಅವರನ್ನು ವಿಚಾರಿಸಬಹುದು. ಆಗಲೂ ಪ್ರಯೋಜನವಾಗದಿದ್ದರೆ ಬಿಜೆಪಿ ದೂರು ನೀಡಿದಲ್ಲಿ ಇದೇ ತಿಂಗಳ 12ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುವುದರಿಂದ ಮೊದಲ ದಿನವೇ ವಿಶ್ವಾತಮತ ಯಾಚಿಸಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೇ ಸೂಚಿಸಬಹುದು ಎಂದು ತಿಳಿದು ಬಂದಿದೆ.

ಒಂದು ವೇಳೆ ಪರಿಸ್ಥಿತಿ ತೀರಾ ಗೊಂದಲಮಯವಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡುವ ಅವಕಾಶವೂ ರಾಜ್ಯಪಾಲರ ಮುಂದಿರುತ್ತದೆ.