ದೇಶದಲ್ಲಿ 1 ಲಕ್ಷ ಕೋಟಿ ಮೌಲ್ಯದ ಶತ್ರು ಆಸ್ತಿ ಹರಾಜಿಗೆ ಕೇಂದ್ರ ನಿರ್ಧಾರ

First Published 15, Jan 2018, 10:12 AM IST
Government plans to auction Enemy Properties worth Rs 1 lakh crore
Highlights

ದೇಶ ವಿಭಜನೆ ಹಾಗೂ ನಂತರದ ದಿನಗಳಲ್ಲಿ ಭಾರತ ತೊರೆದು ಪಾಕಿಸ್ತಾನ ಮತ್ತು ಚೀನಾ ಪೌರತ್ವ ಪಡೆದಿರುವ 94000 ‘ಶತ್ರು’ಗಳಿಗೆ ಸೇರಿದ ಬರೋಬ್ಬರಿ 1 ಲಕ್ಷ ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಹರಾಜು ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಅಂತಹ ಆಸ್ತಿಗಳನ್ನು ಗುರುತಿಸುವ ಕಾರ್ಯವನ್ನು ಪ್ರಾರಂಭಿಸಿದೆ.

ನವದೆಹಲಿ: ದೇಶ ವಿಭಜನೆ ಹಾಗೂ ನಂತರದ ದಿನಗಳಲ್ಲಿ ಭಾರತ ತೊರೆದು ಪಾಕಿಸ್ತಾನ ಮತ್ತು ಚೀನಾ ಪೌರತ್ವ ಪಡೆದಿರುವ 94000 ‘ಶತ್ರು’ಗಳಿಗೆ ಸೇರಿದ ಬರೋಬ್ಬರಿ 1 ಲಕ್ಷ ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಹರಾಜು ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಅಂತಹ ಆಸ್ತಿಗಳನ್ನು ಗುರುತಿಸುವ ಕಾರ್ಯವನ್ನು ಪ್ರಾರಂಭಿಸಿದೆ.

ಈಗಾಗಲೇ 6289 ಶತ್ರುಗಳ ಆಸ್ತಿಯನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. 2991 ಆಸ್ತಿಗಳನ್ನು ಗುರುತಿಸುವುದು ಬಾಕಿ ಇದೆ ಎಂದು ಇತ್ತೀಚೆಗೆ ಗೃಹ ಸಚಿವ ರಾಜನಾಥ ಸಿಂಗ್ ಅವರು ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಲೀಕರ ಹಕ್ಕಿನಿಂದ ಮುಕ್ತವಾಗಿರುವ ಆಸ್ತಿಗಳನ್ನು ಆದಷ್ಟು ಶೀಘ್ರ ಹರಾಜು ಹಾಕಬೇಕು ಎಂದು ರಾಜನಾಥ್ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ಹಾಗೂ ಚೀನಾ ಪೌರತ್ವ ಪಡೆದಿರುವ ವ್ಯಕ್ತಿಗಳಿಗೆ ಸೇರಿದ ಆಸ್ತಿಗಳ ಮೇಲೆ ಅವರ ಉತ್ತರಾಧಿಕಾರಿಗಳಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂಬ ತಿದ್ದುಪಡಿಯನ್ನು 49 ವರ್ಷಗಳಷ್ಟು ಹಳೆಯ ಶತ್ರು ಆಸ್ತಿ (ತಿದ್ದುಪಡಿ ಹಾಗೂ ದೃಢೀಕರಣ) ಕಾಯ್ದೆಗೆ ತರಲಾಗಿತ್ತು. ಹೀಗಾಗಿ ಶತ್ರುಗಳಿಗೆ ಸೇರಿದ ಆಸ್ತಿ ವಶಪಡಿಸಿಕೊಂಡು ಹರಾಜು ಹಾಕುವ ಅಧಿಕಾರ ಸರ್ಕಾರಕ್ಕೆ ಪ್ರಾಪ್ತವಾಗಿದೆ.

9400 ಆಸ್ತಿಗಳ ಪೈಕಿ 9280 ಆಸ್ತಿಗಳು ಪಾಕಿಸ್ತಾನ ಪ್ರಜೆಗಳಿಗೆ ಸೇರಿದ್ದಾಗಿದೆ. ಆ ಪೈಕಿ ಅತಿ ಹೆಚ್ಚು ಅಂದರೆ 4991 ಆಸ್ತಿಗಳು ಉತ್ತರಪ್ರದೇಶದಲ್ಲಿವೆ. 2735 ಆಸ್ತಿಗಳೊಂದಿಗೆ ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ 487 ಆಸ್ತಿಗಳೂ ಇವೆ. ತನ್ನ ದೇಶದಲ್ಲಿರುವ ಭಾರತೀಯರಿಗೆ ಸೇರಿದ ಆಸ್ತಿಗಳನ್ನು ಪಾಕಿಸ್ತಾನ ಈಗಾಗಲೇ ಹರಾಜು ಹಾಕಿದೆ. ಚೀನಾ ಪ್ರಜೆಗಳಿಗೆ ಸೇರಿದ 126 ಆಸ್ತಿಗಳು ದೇಶದಲ್ಲಿದ್ದು, ಆ ಪೈಕಿ ಅತಿ ಹೆಚ್ಚು ಅಂದರೆ 57  ಮೇಘಾಲಯದಲ್ಲಿದ್ದರೆ, 29 ಆಸ್ತಿಗಳು ಪಶ್ಚಿಮ ಬಂಗಾಳದಲ್ಲಿವೆ.

loader