Asianet Suvarna News Asianet Suvarna News

ಗವರ್ನರ್ ಭಾಷಣದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಬಹುಪರಾಕ್; ಆಪ್ತನಿಂದಲೇ ಮೋದಿಗೆ ಟಾಂಗ್ ನೀಡಿದ ಸಿಎಂ

ರಾಜ್ಯದಲ್ಲಿರುವುದು 10 ಪರ್ಸೆಂಟ್‌ ಕಮಿಷನ್‌ ಸರ್ಕಾರ, ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ರಾಜ್ಯ ಎಂದು ಕಾಂಗ್ರೆಸ್‌ ಸರ್ಕಾರದ ಆಡಳಿತವನ್ನು ಕಟುವಾಗಿ ಟೀಕಿಸಿದ್ದ ಪ್ರದಾನಿ ನರೇಂದ್ರ ಮೋದಿ ಅವರಿಗೆ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಮಾಡಿದ ಭಾಷಣದಲ್ಲಿ ತಿರುಗೇಟು ನೀಡುವ ಚಾಣಾಕ್ಷತನವನ್ನು ರಾಜ್ಯ ಸರ್ಕಾರ ಪ್ರದರ್ಶಿಸಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಕ್ರಮಗಳ ಪಟ್ಟಿಯನ್ನು ಸರ್ಕಾರವು ರಾಜ್ಯಪಾಲರಿಂದಲೇ ಓದಿಸಿದೆ.

Governer Admires CM Siddharamaiah Govt Achievement

ಬೆಂಗಳೂರು (ಫೆ.06): ರಾಜ್ಯದಲ್ಲಿರುವುದು 10 ಪರ್ಸೆಂಟ್‌ ಕಮಿಷನ್‌ ಸರ್ಕಾರ, ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ರಾಜ್ಯ ಎಂದು ಕಾಂಗ್ರೆಸ್‌ ಸರ್ಕಾರದ ಆಡಳಿತವನ್ನು ಕಟುವಾಗಿ ಟೀಕಿಸಿದ್ದ ಪ್ರದಾನಿ ನರೇಂದ್ರ ಮೋದಿ ಅವರಿಗೆ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಮಾಡಿದ ಭಾಷಣದಲ್ಲಿ ತಿರುಗೇಟು ನೀಡುವ ಚಾಣಾಕ್ಷತನವನ್ನು ರಾಜ್ಯ ಸರ್ಕಾರ ಪ್ರದರ್ಶಿಸಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಕ್ರಮಗಳ ಪಟ್ಟಿಯನ್ನು ಸರ್ಕಾರವು ರಾಜ್ಯಪಾಲರಿಂದಲೇ ಓದಿಸಿದೆ.

ಮೋದಿ ಅವರು ಮೌನ ವಹಿಸಿದ್ದ ಮಹದಾಯಿ ವಿಚಾರವನ್ನು ರಾಜ್ಯಪಾಲರು ಪ್ರಸ್ತಾಪಿಸುವಂತೆ ಮಾಡಿ, ನದಿ ನೀರಿನ ವಿಚಾರದಲ್ಲಿ ಜನರ ಹಕ್ಕು ಪಡೆಯುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದು ಅವರಿಂದಲೇ ಹೇಳಿಸಿದೆ.

ಸೋಮವಾರ ಸಮಾವೇಶಗೊಂಡ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಸುಮಾರು ಒಂದು ತಾಸು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರ ಭಾಷಣದಲ್ಲಿ ಅಹಿಂದ ವರ್ಗಗಳ ಪರವಾದ ಸಾಮಾಜಿಕ ನ್ಯಾಯದ ನಿಲುವು, ಭ್ರಷ್ಟಾಚಾರ ತಡೆಗಟ್ಟಲು ಭ್ರಷ್ಟಾಚಾರ ನಿಗ್ರಹ ದಳ ಮಾಡಿರುವ ಕಾರ್ಯಾಚರಣೆ, ಕೋಮು ಸಾಮರಸ್ಯ ಕದಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಹಾಗೂ ಮಹದಾಯಿ ನೀರಿಗಾಗಿ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದರು.

ರಾಜ್ಯಪಾಲರು ಹೇಳಿದ್ದೇನು:

ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಮತ್ತು ಸಮಾಜದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ದೊರಕಿಸುವಲ್ಲಿ ಸರ್ಕಾರ ಗಮನಾರ್ಹ ಹೆಜ್ಜೆ ಇರಿಸಿದೆ. ಹಸಿವು ಮುಕ್ತ ಕರ್ನಾಟಕದ ಗುರಿಯನ್ನು ತಲುಪುವಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಇದೇ ವೇಳೆ ಪರಿಶಿಷ್ಟಜಾತಿ ಮತ್ತು ಬುಡಕಟ್ಟು ಜನಾಂಗಗಳಿಗೆ ಜನಸಂಖ್ಯೆ ಆಧರಿತ ಬಜೆಟ್‌ ಹಂಚಿಕೆಯ ಸಂಬಂಧ ಕ್ರಾಂತಿಕಾರಿ ಕಾಯ್ದೆ ಜಾರಿಗೆ ತಂದು, ತಾಂಡಾ, ಹಾಡಿ, ಹಟ್ಟಿಮತ್ತು ಕಾಲೊನಿಗಳಲ್ಲಿ ವಾಸಿಸುತ್ತಿದ್ದ ಜನರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಂಡು, ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಅಂತಹ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಖಾತರಿಪಡಿಸಿದೆ. ಹಠಾತ್ತನೆ ಘಟಿಸುವ ಕೋಮು ಹಿಂಸೆ ಘಟನೆಗಳ ಬಗ್ಗೆ ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್‌ ಇಲಾಖೆ, ಕಾನೂನು ಮತ್ತು ಅಭಿಯೋಜನಾ ಇಲಾಖೆಗಳ ಆಧುನೀಕರಣ ಮತ್ತು ಬಲವರ್ಧನೆಗೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾಕಷ್ಟುಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ನೀರಿಗಾಗಿ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿನ ತನ್ನ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸುತ್ತದೆ. ಮಹದಾಯಿ ಜಲಾನಯನ ಪ್ರದೇಶದಿಂದ ನಮ್ಮ ಜನರಿಗೆ ಹಕ್ಕಿನ ಪಾಲನ್ನು ದೊರಕಿಸುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸುತ್ತದೆ.

ಸಾರ್ವಜನಿಕ ಸೇವೆಗಳಲ್ಲಿ ಇರುವ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ರಾಜ್ಯ ಮುಂದುವರೆಸಿದೆ. ಇ-ಆಡಳಿತ ಉಪಕ್ರಮಗಳ ಸರಣಿಯು ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸಿದೆ. ಭ್ರಷ್ಟಾಚಾರದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಬಳಿಕ 278 ಟ್ರ್ಯಾಪ್‌ ಪ್ರಕರಣಗಳು, 65 ದಾಳಿ ಪ್ರಕರಣಗಳು ಮತ್ತು 61 ಇತರೆ ಪ್ರಕರಣಗಳು ಸೇರಿ ಒಟ್ಟು 404 ಪ್ರಕರಣಗಳು ದಾಖಲಾಗಿವೆ. ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದಾಗಿನಿಂದ ಸರ್ಕಾರವು ಸ್ವೀಕರಿಸಿದ 106 ಪ್ರಕರಣಗಳಲ್ಲಿ, 72 ಪ್ರಕರಣಗಳಲ್ಲಿ ಅಭಿಯೋಜನಾ ಮಂಜೂರಾತಿ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾ ಮಟ್ಟ, ತಾಲೂಕು ಮಟ್ಟಮತ್ತು ಗ್ರಾಮ ಮಟ್ಟದಲ್ಲಿ, ಕಾಲಕಾಲಕ್ಕೆ ಜನಸಂಪರ್ಕ ಸಭೆಗಳನ್ನು ನಡೆಸುವುದರ ಮೂಲಕ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿಯ ಬಗೆಗೆ ಜನರಲ್ಲಿ ಅರಿವನ್ನು ಮೂಡಿಸಲಾಗಿದೆ ಮತ್ತು ದೂರುಗಳನ್ನು ಸ್ವೀಕರಿಸಿದ ನಂತರ ವಿಳಂಬವಿಲ್ಲದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Follow Us:
Download App:
  • android
  • ios