ಕಿನ್ಶಾಸಾ(ಏ.23): ಚಾರ್ಲ್ಸ್ ಡಾರ್ವಿನ್ ನ ಜೀವ ವಿಕಾಸ ಸಿದ್ಧಾಂತ ಅದೆಷ್ಟು ಕರಾರುವಕ್ಕಾಗಿದೆ ಎಂದರೆ, ಇದನ್ನು ಪ್ರಶ್ನಿಸಲು ಮುಂದಾದ ಬಹುತೇಕರು ಜೀವ ವಿಕಾಸದ ಆರಂಭಿಕ ಹಂತದಲ್ಲೇ ಮುಗ್ಗರಿಸಿದ್ದಾರೆ.

ಆಧುನಿಕ ಜೀವ ವಿಜ್ಞಾನದ ಬುನಾದಿಯಾಗಿಯಾಗಿರುವ ಜೀವ ವಿಕಾಸ ಸಿದ್ಧಾಂತದಲ್ಲಿ ಹೇಳಿದ್ದೆಲ್ಲವೂ ದೇವವಾಣಿಯಷ್ಟೇ ಸತ್ಯ. ಮಂಗನಿಂದ ಮಾನವ ಎಂಬ ತಿಳುವಳಿಕೆ ಇನ್ನು ನಿನ್ನೆಯದಲ್ಲ. ಜೀವ ವಿಕಾಸದ ಹಾದಿಯಲ್ಲಿ ಹಂತ ಹಂತವಾಗಿ ಮಾರ್ಪಡುತ್ತಾ ಆಧುನಿಕ ಮಾನವ ರೂಪ ತಳೆದಿದ್ದಾನೆ ಎಂಬುದು ಇದೀಗ ಪ್ರಶ್ನಾತೀತ.

ಅದರಂತೆ ಮನುಷ್ಯನ ಹತ್ತಿರದ ಸಂಬಂಧಿಗಳಾದ ವರಾಂಗ್ಟನ್, ಗೊರಿಲ್ಲಾ ಮುಂತಾದ ಪ್ರಜಾತಿಗಳಲ್ಲಿ ನಾವು ಮಾನವನ ಗುಣಗಳನ್ನು ಕಾಣಬಹುದಾಗಿದೆ. ಇದಕ್ಕೆ ಸಾಕ್ಷಿ ಕಾಂಗೋದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಹಿಡಿದ ಈ ಫೋಟೋ ಸಾಕ್ಷಿ.

ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಆಶ್ರಯ ಪಡೆದಿರುವ ಎರಡು ಗೊರಿಲ್ಲಾಗಳು ಮಾನವನಂತೆ ತನ್ನೆರಡೂ ಕಾಲುಗಳ ಮೇಲೆ ಎದ್ದು ನಿಂತು ಸೆಲ್ಫಿಗೆ ಪೋಸ್ ನೀಡಿವೆ. ಡಕಾಜಿ ಮತ್ತು ಡೇಜೆ ಎಂಬ ಎರಡು ಹೆಣ್ಣು ಗೊರಿಲ್ಲಾಗಳು ತಮ್ಮ ಎರಡೂ ಕಾಲುಗಳ ಮೇಲೆ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ.

ಈ ಕುರಿತು ಮಾಹಿತಿ ನೀಡಿರುವ ಉದ್ಯಾನವನದ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಉಪ ನಿರ್ದೇಶಕ ಬುರಾನ್ಮುವೆ, ಚಿಕ್ಕ ವಯಸ್ಸಿನಿಂದಲೇ ಮನುಷ್ಯರ ಪೋಷಣೆಯಲ್ಲೇ ಬೆಳೆದ ಈ ಎರಡೂ ಹೆಣ್ಣು ಗೊರಿಲ್ಲಾಗಳು ಮನುಷ್ಯರನ್ನು ಅನುಕರಿಸುತ್ತವೆ ಎಂದು ಹೇಳಿದ್ದಾರೆ.

ಲಕ್ಷಾಂತರ ವರ್ಷಗಳ ಹಿಂದೆ ಹೀಗೆಯೇ ಹಂತ ಹಂತವಾಗಿ ಮಾರ್ಪಟ್ಟ ಮಾನವ, ತನ್ನ ಪ್ರಜಾತಿಯ ಇತರ ಜೀವಿಗಳಿಂದ ಬೇರ್ಪಟ್ಟು ಸದ್ಯ ಇಡೀ ಜೀವ ಜಗತ್ತನ್ನು ಆಳುತ್ತಿದ್ದಾನೆ. ಇದೇ ಬೆಳವಣಿಗೆಯ ಹಾದಿಯಲ್ಲಿರುವ ಇತರ ಜೀವಿಗಳೂ ಮುಂದೊಂದು ದಿನ ಆಳ್ವಿಕೆ ಭಾಗ್ಯ ಪಡೆದರೆ ಅಚ್ಚರಿಪಡಬೇಕಿಲ್ಲ.