ಕರ್ನಾಟಕದ ರೈತರಿಗೆ ಗುಡ್ ನ್ಯೂಸ್ : ನೀವಿನ್ನು ಚಿಂತಿಸಬೇಕಿಲ್ಲ..!

Good News For Karnataka Farmers
Highlights

ರೈತರ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸುವಾಗ ರೈತರಿಗೆ ಆ ಬೆಳೆ ಬೆಳೆಯಲು ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಹೊಸ ಆ್ಯಪ್ ಸಿದ್ಧವಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಕೃಷಿ ಬೆಲೆ ಆಯೋಗ ಅಮಯ ಕೃಷಿ (ಆನ್‌ಲೈನ್- ಆಫ್ ಲೈನ್) ಎಂಬ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ. 
 

ಸಂಪತ್ ತರೀಕೆರೆ

ಬೆಂಗಳೂರು :  ರೈತರ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸುವಾಗ ರೈತರಿಗೆ ಆ ಬೆಳೆ ಬೆಳೆಯಲು ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಹೊಸ ಆ್ಯಪ್ ಸಿದ್ಧವಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಕೃಷಿ ಬೆಲೆ ಆಯೋಗ ಅಮಯ ಕೃಷಿ (ಆನ್‌ಲೈನ್- ಆಫ್ ಲೈನ್) ಎಂಬ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ. 
 
 ರೈತರ ಬೆಳೆ ಉತ್ಪಾದನಾ ವೆಚ್ಚವನ್ನು ಲೆಕ್ಕಾಚಾರ ಮಾಡಿ ಬೆಂಬಲ ಬೆಲೆ ನಿಗದಿ ಪಡಿಸಲು ಸರ್ಕಾರಕ್ಕೆ ಈ ಹೊಸ ತಂತ್ರಾಂಶದಿಂದ ಅನುಕೂಲವಾಗಲಿದೆ. ರೈತರ ಜಮೀನಿಗೆ ಹೋಗಿ ನೇರವಾಗಿ ಕಲೆ ಹಾಕಿದ ಮಾಹಿತಿ ಕೃಷಿ ಬೆಲೆ ಆಯೋಗದ ಡ್ಯಾಶ್‌ಬೋರ್ಡ್‌ನಲ್ಲಿ ಸಂಗ್ರಹವಾಗಲಿದ್ದು, ಇದು ಬೆಂಬಲ ಬೆಲೆ ನಿಗದಿ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರಿಯಾಗಲಿದೆ. 

ರೈತರ ಜಮೀನಿಗೆ ಹೋಗಿ ಈ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಲು ಕೃಷಿ ವಿವಿ ಸಿಬ್ಬಂದಿಗೆ ಜವಾಬ್ದಾರಿ ವಹಿಸಲಾಗುತ್ತಿದೆ. ಹಳ್ಳಿಗಳಿಗೆ ಹೋಗಿ ರೈತರ ಕೃಷಿ ಜಮೀನಿನಲ್ಲಿ ಮಾಹಿತಿ ಕಲೆ ಹಾಕುವ ಸಿಬ್ಬಂದಿಗೆ ಅಂತರ್ಜಾಲದ ವ್ಯವಸ್ಥೆಯ ಅಮಯ ಕೃಷಿ ತಂತ್ರಾಂಶ ಇರುವ ಟ್ಯಾಬ್ಲೆಟ್ ನೀಡಲಾಗಿರುತ್ತದೆ. ರೈತರನ್ನು ಸಂಪರ್ಕಿಸಿದ ಸಿಬ್ಬಂದಿ ಆತನಿಂದ ನೇರವಾಗಿ ಮಾಹಿತಿ ಪಡೆದು ಈ ತಂತ್ರಾಂಶದಲ್ಲಿ  ದಾಖಲಿಸುತ್ತಿದ್ದಂತೆ ಮಾಹಿತಿಯು ನೇರವಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಕಚೇರಿಯಲ್ಲಿ ಅಳವಡಿಸಲಾಗಿರುವ ಡ್ಯಾಶ್‌ ಬೋರ್ಡ್‌ನಲ್ಲಿ ದಾಖಲಾಗುವ ವ್ಯವಸ್ಥೆ ಮಾಡಲಾಗಿದೆ. 

ಈ ಕಾರ್ಯಕ್ಕಾಗಿ ಬೆಂಗಳೂರು, ಧಾರವಾಡ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿವಿ ಮತ್ತು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಸಹಕಾರ ಪಡೆಯಲಾಗಿದೆ. ರೈತರ ಸಹಯೋಗ ಮತ್ತು ಸಹಮತ ಪಡೆದು ಉತ್ಪಾದನಾ ವೆಚ್ಚವನ್ನು ಅತ್ಯಂತ ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡುವುದು ಈ ತಂತ್ರಾಂಶದ ಉದ್ದೇಶ. 

ಸರ್ಕಾರಕ್ಕೆ ವರದಿ!: ಹಿಂಗಾರಿಗಿಂತ ಮೊದಲೇ ರೈತರ ಹೊಲದಲ್ಲಿ ಬೆಳೆಯುವ ಬೆಳೆಗಳ ಉತ್ಪಾದನೆಯ ಮಾಹಿತಿಯನ್ನು  ಆನ್‌ಲೈನ್ - ಆಫ್‌ಲೈನ್ ತಂತ್ರಜ್ಞಾನದಲ್ಲಿ ಪಡೆಯಲಾಗುತ್ತಿದೆ. ಜೂನ್ ಮುಕ್ತಾಯದ ಅವಧಿಗೆ ಅಥವಾ ಜುಲೈನಲ್ಲಿ ಮುಂಗಾರಿನ ಕೃಷಿ ಉತ್ಪನ್ನಗಳ ಮಾಹಿತಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. 

ಇದರ ಜತೆಗೆ ಎಲ್ಲ ಬೆಳೆವಾರು ಉತ್ಪಾದನೆ ಮತ್ತು  ಮಾರುಕಟ್ಟೆಗೆ ಬರುವ ಅವಕವನ್ನು ಕ್ಷಣ ಮಾತ್ರದಲ್ಲಿ ಡ್ಯಾಶ್‌ಬೋರ್ಡ್ ಮೂಲಕ ತಿಳಿಯಬಹುದಾಗಿದೆ. ಹಾಗೆಯೇ ಬೆಳೆಯ ಬೆಲೆ ಮುಂದಿನ ಆರು ತಿಂಗಳವರೆಗೆ ಹೇಗೆ ಇರುತ್ತದೆ ಎಂದು ಈ ಡ್ಯಾಶ್ ಬೋರ್ಡ್‌ನಲ್ಲಿ ಅಂಕಿಸಂಖ್ಯೆ ತಿಳಿಯುವಂತೆ ಎಲ್ಲಾ ಎಪಿಎಂಸಿಗಳಿಂದ ಪ್ರತಿ ದಿನದ ವಹಿವಾಟಿನ ಮಾಹಿತಿ ಇದರಲ್ಲಿ ದಾಖಲಾಗಲಿದೆ ಎಂದು ಕರ್ನಾಟಕ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ. 

ಕೃಷಿ ವಿವಿಗಳಿಗೆ ಜವಾಬ್ದಾರಿ: ಪ್ರಮುಖ ಬೆಳೆವಾರು ಎರಡು ಜಿಲ್ಲೆಗಳು, ಜಿಲ್ಲೆಗೆ ತಲಾ 2 ತಾಲೂಕಿನಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಪ್ರತಿ ತಾಲೂಕಿಗೆ ಸಣ್ಣ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರಂತೆ ಒಟ್ಟು 20  ರೈತರನ್ನು ಆಯ್ಕೆ ಮಾಡಿಕೊಂಡು ಸರ್ವೆ ನಡೆಸಲಾಗುತ್ತಿದೆ. ಸರ್ವೆ ಜವಾಬ್ದಾರಿಯನ್ನು ಕೃಷಿ ವಿವಿಗಳಿಗೆ ವಹಿಸಲಾಗಿದೆ. ಆಯಾ ಜಿಲ್ಲೆಗಳ ಪ್ರಮುಖ ಬೆಳೆಯ ಕುರಿತು ಮಾಹಿತಿ ಸಂಗ್ರಹಿಸಲಾಗುವುದು.

loader