ಬೆಂಗಳೂರು ನಾಗರಿಕರಿಗೆ ಸಿಹಿ ಸುದ್ದಿ : ಇಂದಿನಿಂದ 8 ಹೊಸ ರೈಲುಗಳ ಓಡಾಟ

Good News For Bengaluru People
Highlights

ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವೆ 4 ಹೊಸ ಮೆಮು (ವಿದ್ಯುತ್ ಚಾಲಿತ) ರೈಲು ಹಾಗೂ ಬಾಣಸ ವಾಡಿ- ಹೊಸೂರು (ಬೈಯಪ್ಪನ ಹಳ್ಳಿ ಮಾರ್ಗ) ನಡುವೆ ನಾಲ್ಕು ಡೆಮು (ಡೀಸೆಲ್ ಚಾಲಿತ) ರೈಲು ಸೋಮವಾರದಿಂದ (ಮಾ.12) ಸಂಚರಿಸಲಿವೆ.

ಬೆಂಗಳೂರು :  ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವೆ 4 ಹೊಸ ಮೆಮು (ವಿದ್ಯುತ್ ಚಾಲಿತ) ರೈಲು ಹಾಗೂ ಬಾಣಸ ವಾಡಿ- ಹೊಸೂರು (ಬೈಯಪ್ಪನ ಹಳ್ಳಿ ಮಾರ್ಗ) ನಡುವೆ ನಾಲ್ಕು ಡೆಮು (ಡೀಸೆಲ್ ಚಾಲಿತ) ರೈಲು ಸೋಮವಾರದಿಂದ (ಮಾ.12) ಸಂಚರಿಸಲಿವೆ.

ಈ 8 ಹೊಸ ರೈಲು ಸಂಚಾರದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್‌ಫೀಲ್ಡ್ ಕಡೆಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆಯಿದೆ. ಐಟಿ-ಬಿಟಿ ಕಂಪನಿಗಳು ಹೆಚ್ಚಿರುವ ಈ ಪ್ರದೇಶಗಳಿಗೆ ಹೆಚ್ಚುವರಿ ರೈಲು ಕಲ್ಪಿಸುವ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ. ನೂತನ ರೈಲು ಸಂಪರ್ಕದಿಂದ ಮೆಜೆಸ್ಟಿಕ್‌ನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಒಂದು ತಾಸಿನಲ್ಲಿ ವೈಟ್‌ಫೀಲ್ಡ್ ತಲುಪಬಹುದು.

ಎಂಟು ಬೋಗಿಗಳ ಎಂಟು ನೂತನ ರೈಲುಗಳು ಭಾನುವಾರ ಹೊರತುಪಡಿಸಿ ಉಳಿದ ಆರು ದಿನ ಈ ಮಾರ್ಗದಲ್ಲಿ ಸಂಚರಿಸಲಿವೆ. ಪ್ರತಿ ರೈಲಿನಲ್ಲಿ ಒಮ್ಮೆಗೆ 2,400 ಮಂದಿ ಪ್ರಯಾಣಿಸಬಹುದು. ಡೀಸೆಲ್ ಚಾಲಿತ ಡೆಮು ರೈಲಿಗಿಂತ ವಿದ್ಯುತ್ ಚಾಲಿತ ಮೆಮು ರೈಲುಗಳ ವೇಗ ಹೆಚ್ಚಿರುತ್ತದೆ. ಈ ನೂತನ ಸೇವೆಗಳು ಜನರ ಕಚೇರಿಗೆ ಸಮಯಕ್ಕೆ ಹೊಂದಿಕೆಯಾಗುವಂತೆ ವೇಳಾ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಸ್ತುತ 110 ಉಪನಗರ ರೈಲುಗಳು ನಗರದಲ್ಲಿ ಸಂಚರಿಸುತ್ತಿದ್ದು, ಇದೀಗ ಹೆಚ್ಚುವರಿಯಾಗಿ 8 ಹೊಸ ರೈಲುಗಳು ಸೇರ್ಪಡೆಯಾಗಿವೆ.

ಮಾ.8ರಂದು ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ 8 ಹೊಸ ಉಪನಗರ ರೈಲು ಸೇವೆ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ನೈಋತ್ಯ ರೈಲ್ವೆ ನೂತನ ರೈಲು ಸೇವೆ ವೇಳಾಪಟ್ಟಿ ಪ್ರಕಟಿಸಿದೆ.

loader