ಕೊಲ್ಲಂ[ಜೂ.14]: ಹಸುವೊಂದು ಆಕಸ್ಮಿಕವಾಗಿ ಆಹಾರದ ಜೊತೆ ಸೇವಿಸಿದ್ದ ಮಂಗಳಸೂತ್ರವೊಂದು, ಎರಡು ವರ್ಷದ ಬಳಿಕ ಸೆಣಗಿ ಗೊಬ್ಬರದಲ್ಲಿ ಪತ್ತೆಯಾಗಿ, ಕೊನೆಗೆ ಆನ್‌ಲೈನ್‌ ಮೂಲಕ ಮೂಲ ವಾರಸುದಾರರಿಗೆ ಕೈಸೇರುವ ಹಂತ ತಲುಪಿದ ಅಚ್ಚರಿಯ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಕೊಲ್ಲಂ ಜಿಲ್ಲೆಯ ಥಡಯನೂರ್‌ನ ಇಲ್ಯಾಸ್‌ ಎಂಬುವವರ ಮನೆಯಲ್ಲಿ ಎರಡು ವರ್ಷದ ಹಿಂದೆ ಅವರ ಪತ್ನಿಗೆ ಸೇರಿದ ಮಂಗಳಸೂತ್ರ ನಾಪತ್ತೆಯಾಗಿತ್ತು. ಸಾಕಷ್ಟುಹುಡುಕಾಟ ನಡೆಸಿದ್ದರೂ ಅದು ಪತ್ತೆಯಾಗಿರಲಿಲ್ಲ. ಬಳಿಕ ಅವರೂ ಸುಮ್ಮನಾಗಿದ್ದರು.

ಈ ನಡುವೆ ಥಡಯನೂರ್‌ನಿಂದ 12 ಕಿ.ಮೀ ದೂರದಲ್ಲಿರುವ ಚಡಾಯಮಂಗಲಂ ಎಂಬ ಗ್ರಾಮದ ಶಿಕ್ಷಕ ದಂಪತಿ ಶುಜಾ ಉಲ್‌ ಮುಲ್‌್ಕ ಮತ್ತು ಶಾಹಿನಾ ಎನ್ನುವವರು ಕೃಷಿ ಉದ್ದೇಶಕ್ಕಾಗಿ 6 ತಿಂಗಳ ಹಿಂದೆ ಸೆಗಣಿ ಗೊಬ್ಬರ ಖರೀದಿಸಿದ್ದರು. ಇತ್ತೀಚೆಗೆ ಆ ಗೊಬ್ಬರವನ್ನು ತೋಟಕ್ಕೆ ಹಾಕುವಾಗ ಅದರಲ್ಲಿ ಮಂಗಳಸೂತ್ರ ಕಂಡುಬಂದಿತ್ತು. ಅದರ ಮೇಲೆ ಇಲ್ಯಾಸ್‌ ಎಂದು ಹೆಸರು ಕೂಡಾ ಬರೆದಿತ್ತು. ಇದನ್ನು ಗಮನಿಸಿದ ಶುಜಾ ಮತ್ತು ಶಾಹಿನಾ ದಂಪತಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಬಾಯಿಂದ ಬಾಯಿಗೆ ಹರಡಿ ಇಲ್ಯಾಸ್‌ ಅವರ ಕಿವಿಗೂ ತಲುಪಿದೆ. ಅವರು ಮಂಗಳಸೂತ್ರ ತಮಗೆ ಸೇರಿದ್ದೆಂದು ತಿಳಿಸಿದ್ದಾರೆ.

ಮಂಗಳಸೂತ್ರ ಕಳವಾದಾಗ ಅದನ್ನು ಹಸುವೇ ತಿಂದಿರಬಹುದು ಎಂಬ ಶಂಕೆ ಇತ್ತು. ಆದರೆ ಅದನ್ನು ಖಚಿತಪಡಿಸುವುದು ಸಾಧ್ಯವಿರಲಿಲ್ಲ. ಕೆಲ ದಿನಗಳ ಬಳಿಕ ಹಸುವನ್ನು ನಾವು ಮಾರಾಟ ಕೂಡಾ ಮಾಡಿದ್ದೆವು. ಇದೀಗ ಹಸು ಎಲ್ಲಿದೆಯೋ ಗೊತ್ತಿಲ್ಲ. ಬಹುಷ ಆ ಹಸುವೇ ಎಲ್ಲೋ ಸೆಗಣಿ ಹಾಕಿದ್ದು, ಅದು ಗೊಬ್ಬರದಲ್ಲಿ ಸೇರಿಕೊಂಡಿದೆ ಎಂದು ಇಲ್ಯಾಸ್‌ ಹೇಳಿದ್ದಾರೆ. ಹೀಗಾಗಿ ಇದೀಗ ಪೊಲೀಸರ ಸಮ್ಮುಖದಲ್ಲಿ ಮಂಗಳಸೂತ್ರ ಹಸ್ತಾಂತರಕ್ಕೆ ಶಿಕ್ಷಕ ದಂಪತಿ ನಿರ್ಧರಿಸಿದ್ದಾರೆ.