ಬೆಂಗಳೂರು[ಜು.12]: ರಾಜ್ಯದಲ್ಲಿ ಕಳೆದ 8-10 ತಿಂಗಳಿಂದ ಹಾಗೂ ವಿಶೇಷವಾಗಿ ಕಳೆದ ಒಂದು ವಾರದಿಂದ ನಡೆದ ರಾಜಕೀಯ ಘಟನೆಗಳಿಂದ ತಲೆತಗ್ಗಿಸುವಂತಾಗಿದೆ. ಇದಕ್ಕಾಗಿ ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಲ್ಲೂ ಕ್ಷಮೆ ಯಾಚಿಸುತ್ತೇನೆ ಎಂದು ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಮುಂಬೈನಲ್ಲಿ ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಕೊಂಚ ವಿಷಾದದಿಂದಲೇ ಮಾತನಾಡಿದ ಅವರು, ಕಳೆದ 8-10 ತಿಂಗಳಿಂದ ಹಾಗೂ ಕಳೆದ ಒಂದು ವಾರದಿಂದ ನಡೆದ ರಾಜಕೀಯ ಘಟನೆಗಳಿಂದ ತಲೆತಗ್ಗಿಸುವಂತಾಗಿದೆ. ಇದಕ್ಕಾಗಿ ನಾನು ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ. ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರನ್ನೂ ಕ್ಷಮೆ ಕೇಳುತ್ತೇನೆ ಎಂದರು. ನನಗೆ ಬಂದ ಸ್ಥಿತಿ ನನ್ನ ವೈರಿಗೂ ಬರುವುದು ಬೇಡ. ನಾವೆಲ್ಲಾ ಏನೇ ನಿರ್ಧಾರ ತೆಗೆದುಕೊಂಡಿದ್ದರೂ, ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಪ್ರೀಂ ಕೋರ್ಟ್‌ ಆದೇಶದಂತೆ ಎಲ್ಲ ಅತೃಪ್ತ ಶಾಸಕರೂ ಬೆಂಗಳೂರಿಗೆ ಹೋಗಿ ಸ್ಪೀಕರ್‌ಗೆ ಕ್ರಮಬದ್ಧವಾಗಿ ರಾಜೀನಾಮೆ ನೀಡುತ್ತೇವೆ. ವಿಧಾನಸೌಧದಲ್ಲಿ ಬುಧವಾರ ರಾಜೀನಾಮೆ ಸಲ್ಲಿಸಲು ಬಂದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಅವರನ್ನು ಕಾಂಗ್ರೆಸ್‌ನ ಕೆಲ ನಾಯಕರು ಕೊರಳಪಟ್ಟಿಹಿಡಿದು ಎಳೆದಾಡಿದ ಘಟನೆ ಸರಿಯಲ್ಲ. ಇದೇ ಸಂದರ್ಭದಲ್ಲಿ ಹೊನ್ನಾಳಿಯ ಬಿಜೆಪಿ ಶಾಸಕ ರೇಣುಕಾಚಾರ್ಯ ಮತ್ತು ಸಚಿವ ಯು.ಟಿ.ಖಾದರ್‌ ಏಕವಚನದಲ್ಲಿ ಬೈದಾಡಿಕೊಂಡದ್ದೂ ಸರಿಯಲ್ಲ. ಹೊನ್ನಾಳಿ ಶಾಸಕರ ನಡೆ ಕೂಡ ಸರಿಯಲ್ಲ. ಇಂತಹ ಘಟನೆಗಳಿಂದ ಬೇಸರವಾಗಿದೆ, ಇಂತಹ ಘಟನೆಗಳು ನಡೆಯಬಾರದು ಎಂದರು.

ಡಿಕೆಶಿ ಪರ ಬ್ಯಾಟಿಂಗ್‌!

ಸಚಿವ ಡಿ.ಕೆ.ಶಿವಕುಮಾರ್‌ ನನ್ನ ಸ್ನೇಹಿತನೇ ಅಲ್ಲ ಎಂದು ಬುಧವಾರವಷ್ಟೇ ಹರಿಹಾಯ್ದಿದ್ದ ರಮೇಶ್‌ ಜಾರಕಿಹೊಳಿ, ಗುರುವಾರ ಮಾತ್ರ ಶಿವಕುಮಾರ್‌ ಅವರಿಗೆ ವೈಯಕ್ತಿವಾಗಿ ಏನೇ ಆದರೂ ಅವರ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಅವರು, ನನ್ನ ಮಿತ್ರನಾಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಯಾವುದೋ ಕೆಟ್ಟಗಳಿಗೆಯಲ್ಲಿ ಸ್ನೇಹ ಕಳೆದುಕೊಂಡು ಬೇರೆಯಾಗಿದ್ದೇವೆ. ಬುಧವಾರ ಇಡೀ ದಿನ ಶಾಸಕರನ್ನು ಮನವೊಲಿಸಲು ಆಗಮಿಸಿದ್ದ ಅವರು ಅನುಭವಿಸಿದ ಸ್ಥಿತಿ ನೋಡಿ ಬೇಜಾರಾಯಿತು. ಅವರಿಗೆ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ದೇವರು ಒಳ್ಳೆಯದು ಮಾಡಲಿ. ವೈಯಕ್ತಿಕವಾಗಿ ಅವರಿಗೆ ಏನೇ ಆದರೂ ಅವರ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದರು.