1986ರಲ್ಲಿ ಈ ಯೋಜನೆ ಆರಂಭವಾಗಿ 2009ರಲ್ಲಿ ಮುಕ್ತಾಯಗೊಂಡಿದೆ. ರಾಜ್ಯದ 553 ಎಕರೆ ಪ್ರದೇಶವನ್ನು ಈ ಯೋಜನೆಗೆ ಬಳಸಿಕೊಳ್ಳುವಾಗ ಕರ್ನಾಟಕ ತಕರಾರು ಎತ್ತಿಲ್ಲ. ಔದಾರ್ಯತೆ ಮೆರೆದಿದೆ.

-ವಸಂತಕುಮಾರ ಕತಗಾಲ ಸುವರ್ಣಸೌಧ

ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳು ನಮ್ಮದೇ ಕರ್ನಾಟಕದ ತಿಲಾರಿ ಎಂಬ ಗಡಿ ಪ್ರದೇಶದಲ್ಲಿ ಡ್ಯಾಂ ನಿರ್ಮಿಸಿ ವಿದ್ಯುತ್ ಹಾಗೂ ನೀರಾವರಿ ಯೋಜನೆ ರೂಪಿಸಿವೆ. ಕರ್ನಾಟಕದ ಈ ಔದಾರ್ಯ ಮೆರೆದಿದ್ದರೂ ಈ ಎರಡು ನೆರೆರಾಜ್ಯಗಳು ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತಿವೆ.

ಎಲ್ಲಿದೆ ತಿಲಾರಿ:

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿದೆ. ಬೆಳಗಾವಿಯಿಂದ ಕೇವಲ 30 ಕಿ.ಮೀ. ದೂರದಲ್ಲಿ ಈ ಸ್ಥಳ ಇದೆ. ತಿಲಾರಿ ಎಂಬ ನದಿಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಾಂದಗಡ್ ತಾಲೂಕಿನಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಅಣೆಕಟ್ಟಿನ ಮೇಲ್ಭಾಗ ಅಂದರೆ ಜಲಾನಯನ ಪ್ರದೇಶ ಕರ್ನಾಟಕದಲ್ಲಿದೆ.

1986ರಲ್ಲಿ ಈ ಯೋಜನೆ ಆರಂಭವಾಗಿ 2009ರಲ್ಲಿ ಮುಕ್ತಾಯಗೊಂಡಿದೆ. ರಾಜ್ಯದ 553 ಎಕರೆ ಪ್ರದೇಶವನ್ನು ಈ ಯೋಜನೆಗೆ ಬಳಸಿಕೊಳ್ಳುವಾಗ ಕರ್ನಾಟಕ ತಕರಾರು ಎತ್ತಿಲ್ಲ. ಔದಾರ್ಯತೆ ಮೆರೆದಿದೆ. ಇದು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜಂಟಿ ಯೋಜನೆ. ಇದರಿಂದ ಮಹಾರಾಷ್ಟ್ರಕ್ಕೆ 50 ಮೆ.ವ್ಯಾ. ಹಾಗೂ ಗೋವಾಕ್ಕೆ 10 ಮೆ.ವ್ಯಾ. ವಿದ್ಯುತ್ ಲಭಿಸುತ್ತಿದೆ. ಉತ್ತರ ಗೋವಾದ ಪೆರ್ನೆಂ, ಬಿಚೋಲಿಂ ಹಾಗೂ ಬಾರ್ಡೆಜ್ ತಾಲೂಕುಗಳಿಗೆ ಇದೆ ಡ್ಯಾಂನಿಂದ ನೀರುಣಿಸಲಾಗುತ್ತದೆ. ಮಹಾರಾಷ್ಟ್ರದ ಎರಡು ತಾಲೂಕುಗಳಿಗೂ ನೀರಾವರಿ ಜಲಾಶಯದಿಂದ ಆಗುತ್ತಿದೆ.

ಮಹದಾಯಿಯಲ್ಲಿ 120 ಟಿಎಂಸಿ ನೀರು ಗೋವಾಕ್ಕೆ ಲಭಿಸುತ್ತಿದ್ದರೂ ಕೇವಲ 7.5 ಟಿಎಂಸಿಯಷ್ಟು ನೀರು ಬಳಸಿಕೊಳ್ಳುವ ಕಳಸಾ ಬಂಡೂರಿ ಯೋಜನೆಗೆ ನೆರೆರಾಜ್ಯಗಳೆರಡೂ ಅಡ್ಡಗಾಲು ಹಾಕುತ್ತಿವೆ. ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್, ತಿಲಾರಿ ಯೋಜನೆಯನ್ನು ಪ್ರಸ್ತಾಪಿಸಿ, ರಾಜ್ಯದ ಯೋಜನೆಗೆ ಈ ಎರಡು ನೆರೆ ರಾಜ್ಯಗಳು ಅಡ್ಡಿಪಡಿಸಬಾರದಿತ್ತು ಎಂದರು.

ಗೋವಾ ವಿಮೋಚನೆಯಲ್ಲೂ ರಾಜ್ಯದ ಪಾತ್ರ

ಕೇವಲ ತಿಲಾರಿ ಯೋಜನೆಯಷ್ಟೇ ಅಲ್ಲ. ಗೋವಾ ವಿಮೋಚನೆಯಲ್ಲೂ ಕರ್ನಾಟಕದ ಪಾತ್ರ ತುಂಬ ದೊಡ್ಡದು. ಪ್ರತಿದಿನ ಬೆಳಗಾವಿಯಿಂದ 1 ಲಕ್ಷ ಲೀ. ಹಾಲು ಗೋವಾಕ್ಕೆ ಹೋಗುತ್ತದೆ. 50 ಟನ್‌ಗಳಷ್ಟು ತರಕಾರಿ ಗೋವಾಕ್ಕೆ ಹೋಗುತ್ತದೆ. ಗೋವಾದ ನಿರ್ಮಾಣ ಕಾರ್ಯದಲ್ಲಿ ರಾಜ್ಯದ ಕಾರ್ಮಿಕರೇ ತೊಡಗಿಕೊಂಡಿದ್ದಾರೆ. ಗೋವಾಕ್ಕೆ ರಾಜ್ಯದ ಕೊಡುಗೆ ಸಾಕಷ್ಟಿದೆ. ಹೀಗಿದ್ದರೂ ಗೋವಾ ರಾಜ್ಯಕ್ಕೆ ಮಗ್ಗುಲ ಮುಳ್ಳಾಗಿದೆ.

ನಮ್ಮದೆ ನೆಲ ಹಾಗೂ ನಮ್ಮದೆ ನೀರನ್ನು ಬಳಸಿಕೊಂಡು ತಿಲಾರಿ ಎಂಬಲ್ಲಿ ಗೋವಾ ಹಾಗೂ ಮಹಾರಾಷ್ಟ್ರ ಜಂಟಿಯಾಗಿ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ನಮ್ಮ ಮಹದಾಯಿಗೆ ಅಡ್ಡಿಪಡಿಸುತ್ತಿರುವುದು ದುರದೃಷ್ಟಕರ ಸಂಗತಿ.

-ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ