ಪಣಜಿ [ಜು.13]: ಕಾಂಗ್ರೆಸ್ಸಿನ 10 ಶಾಸಕರು ಬಿಜೆಪಿಗೆ ಜಿಗಿದ ಬೆನ್ನಲ್ಲೇ, ಅಲ್ಪಬಹುಮತ ಹೊಂದಿದ್ದ ಗೋವಾದ ಬಿಜೆಪಿ ನೇತೃತ್ವದ ಸರ್ಕಾರವನ್ನೇ ಅಸ್ಥಿರಗೊಳಿಸುವ ಬೆದರಿಕೆಯೊಡ್ಡುತ್ತಿದ್ದ ಓರ್ವ ಸ್ವತಂತ್ರ ಶಾಸಕ ಹಾಗೂ ಗೋವಾ ಫಾರ್ವರ್ಡ್‌ ಮೂವರು ಸಚಿವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸೂಚಿಸಿದ್ದಾರೆ. ಹೀಗೆ ರಾಜೀನಾಮೆ ನೀಡುವಂತೆ ಸೂಚಿಸಲ್ಪಟ್ಟವರ ಪೈಕಿ ಜಿಎಫ್‌ಪಿ ಪಕ್ಷದ ನಾಯಕ, ಉಪಮುಖ್ಯಮಂತ್ರಿ ವಿಜಯ್‌ ಸರ್‌ದೇಸಾಯಿ ಕೂಡಾ ಸೇರಿದ್ದಾರೆ.

ಖಾಲಿಯಾಗುವ 4 ಸ್ಥಾನಗಳ ಪೈಕಿ 3ನ್ನು ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ 10 ಜನರ ಪೈಕಿ ಮೂವರಿಗೆ ನೀಡಲು ನಿರ್ಧರಿಸಲಾಗಿದೆ. ಈ ಪೈಕಿ ಇದುವರೆಗೆ ಗೋವಾ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ಚಂದ್ರಕಾಂತ್‌ ಕವ್ಲೇಕರ್‌ ಅವರಿಗೆ ಶನಿವಾರ ನಡೆಯುಲಿರುವ ಸಂಪುಟ ಪುನಾರಚನೆ ವೇಳೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ವಿಜಯ್‌ ಸರ್‌ದೇಸಾಯಿ, ಬಿಜೆಪಿಯ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ 2017ರಲ್ಲಿ ಮನೋಹರ್‌ ಪರ್ರಿಕರ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ನಾವು ನಿರ್ಧಾರ ಕೈಗೊಂಡಿದ್ದೆವು. ಆಗ ನಾವು ಮಾತುಕತೆ ನಡೆಸಿದ್ದ ಬಿಜೆಪಿ ನಾಯಕರು ಈಗಿಲ್ಲ. ಜೊತೆಗೆ ಬೆಳವಣಿಗೆ ಕುರಿತು ನಮಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತು ನಾವು ಕೇಂದ್ರ ಬಿಜೆಪಿ ನಾಯಕರೊಂದಿಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.