ಸಮಾಜದಲ್ಲಿ ಲಿಂಗ ತಾರತಮ್ಯ ಸಾಕಷ್ಟುನಿವಾರಣೆ ಆಗಿದೆ ಎಂಬ ಅಭಿಪ್ರಾಯವಿದ್ದರೂ ಜನರಲ್ಲಿ ಇನ್ನೂ ಕೂಡ ಶಿಕ್ಷಣ ನೀಡುವ ವಿಚಾರದಲ್ಲಿ ಗಂಡು ಮತ್ತು ಹೆಣ್ಣು ಮಗುವಿನ ನಡುವೆ ಭಾರಿ ಪ್ರಮಾಣದ ತಾರತಮ್ಯ ಇರುವ ವಿಚಾರ ಶಿಕ್ಷಣ ಇಲಾಖೆಯು ಸದನದಲ್ಲಿ ನೀಡಿದ ಅಂಕಿ-ಅಂಶವೊಂದರಿಂದ ಬಹಿರಂಗವಾಗಿದೆ.

ಬೆಂಗಳೂರು(ಜೂ.17): ಸಮಾಜದಲ್ಲಿ ಲಿಂಗ ತಾರತಮ್ಯ ಸಾಕಷ್ಟುನಿವಾರಣೆ ಆಗಿದೆ ಎಂಬ ಅಭಿಪ್ರಾಯವಿದ್ದರೂ ಜನರಲ್ಲಿ ಇನ್ನೂ ಕೂಡ ಶಿಕ್ಷಣ ನೀಡುವ ವಿಚಾರದಲ್ಲಿ ಗಂಡು ಮತ್ತು ಹೆಣ್ಣು ಮಗುವಿನ ನಡುವೆ ಭಾರಿ ಪ್ರಮಾಣದ ತಾರತಮ್ಯ ಇರುವ ವಿಚಾರ ಶಿಕ್ಷಣ ಇಲಾಖೆಯು ಸದನದಲ್ಲಿ ನೀಡಿದ ಅಂಕಿ-ಅಂಶವೊಂದರಿಂದ ಬಹಿರಂಗವಾಗಿದೆ.

ಅದು - ಸರ್ಕಾರಿ ಶಾಲೆಗಳಿಗೆ ಸೇರುವವವರಲ್ಲಿ ಹೆಣ್ಣು ಮಕ್ಕಳು ಹೆಚ್ಚು. ಆರ್‌ಟಿಇ ಅಡಿ ಗಂಡು ಮಕ್ಕಳನ್ನು ಹೆಚ್ಚಾಗಿ ಖಾಸಗಿ ಶಾಲೆಗೆ ಸೇರಿಸಲು ಪೋಷಕರು ಬಯಸುತ್ತಾರೆ!

ವಿಧಾನ ಪರಿಷತ್‌ನಲ್ಲಿ ಸದಸ್ಯ ಸೋಮಣ್ಣ ಬೇವಿನಮರದ ಕೇಳಿದ ಪ್ರಶ್ನೆಗೆ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಉತ್ತರ ನೀಡುವ ವೇಳೆ ಇಂತಹುದೊಂದು ವಿಚಾರವನ್ನು ಬಹಿರಂಗಪಡಿ ಸಿದರು. ರಾಜ್ಯದಲ್ಲಿ ಒಟ್ಟು 35,159 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ 391 ಗಂಡುಮಕ್ಕಳ ಶಾಲೆಗಳಿದ್ದರೆ, 536 ಹೆಣ್ಣುಮಕ್ಕಳ ಶಾಲೆಗಳಿವೆ. ಉಳಿದ ಶಾಲೆಗಳಲ್ಲಿ ಗಂಡು ಮತ್ತು ಹೆಣ್ಣುಮಕ್ಕಳಿಗೆ ಸಹ-ಶಿಕ್ಷಣ ನೀಡಲಾಗುತ್ತಿದೆ.

ಇನ್ನು ಪ್ರೌಢಶಾಲೆಗಳ ಪೈಕಿ 119 ಗಂಡುಮಕ್ಕಳ ಹಾಗೂ 436 ಹೆಣ್ಣು ಮಕ್ಕಳ ಪ್ರೌಢಶಾಲೆಗಳಿವೆ ಎಂದು ಸಚಿವ ಸೇಠ್‌ ಉತ್ತರ ದಲ್ಲಿ ತಿಳಿಸಿದ್ದಾರೆ. ಈಗಲೂ ಸಹ ಪಾಲಕರು ಗಂಡುಮಕ್ಕಳಿದ್ದರೆ ಖಾಸಗಿ ಶಾಲೆಗಳಿಗೆ ಕಳಿಸಲು ಇಚ್ಛಿಸುತ್ತಾರೆ. ಹೆಣ್ಣುಮಕ್ಕಳಿದ್ದರೆ ಸರ್ಕಾರಿ ಶಾಲೆಗೆ ಕಳಿಸಲು ಇಚ್ಛಿಸುತ್ತಾರೆ. ಹೆಣ್ಣುಮಕ್ಕಳ ಶಾಲೆಗಳ ಸಂಖ್ಯೆ ಹೆಚ್ಚಿರಲು ಇದೇ ಕಾರಣ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.